ADVERTISEMENT

200 ವರ್ಷಗಳ ಬುದ್ಧ ವಿಗ್ರಹ ಮಾರಾಟ ಯತ್ನಿಸಿದವನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 1:47 IST
Last Updated 19 ಡಿಸೆಂಬರ್ 2022, 1:47 IST
   

ಬೆಂಗಳೂರು: ‘200 ವರ್ಷ ಹಳೆಯದ್ದು’ ಎನ್ನಲಾದ ಬುದ್ಧ ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ಪಂಚಮರ್ತಿ ರಘು ರಾಮ ಚೌಧರಿ ಅಲಿಯಾಸ್ ಪಿ.ರಘು, ಉದಯ್‌ಕುಮಾರ್, ಫ್ರೆಡ್ಡಿ ಡಿಸೋಜ್, ಶರಣ್ ನಾಯರ್ ಹಾಗೂ ಎಂ.ಕೆ. ಪ್ರಸನ್ನ ಬಂಧಿತರು. 'ಎಲ್ಲರೂ ರಿಯಲ್ ಎಸ್ಟೇಟ್ ಮಧ್ಯರ್ತಿಗಳು. ಅಕ್ರಮ ಹಣ ಸಂಪಾದನೆಗೆ ವಿಗ್ರಹ ಮಾರಾಟಕ್ಕೆ ಯೋಚಿಸಿದ್ದರು. ಇವರಿಂದ 38 ಸೆಂ.ಮೀ ಉದ್ದದ ಬುದ್ಧ ವಿಗ್ರಹ, ಸೂಟ್‌ಕೇಸ್ ಹಾಗೂ 5 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಕಳ್ಳತನ ಮಾಡಿದ್ದ ಪುರಾತನ ಕಲ್ಲಿನ ವಿಗ್ರಹವನ್ನು ಹೈದರಾಬಾದ್‌ ನಿವಾಸಿ ಶ್ರೀಕಾಂತ್ ಆರೋಪಿ ಪಂಚಮರ್ತಿ ರಘುಗೆ ₹30 ಲಕ್ಷಕ್ಕೆ ಮಾರಿದ್ದ. ವಿದೇಶದಲ್ಲಿ ಮಾರಿದರೆ ಕೋಟಿಗೂ ಹೆಚ್ಚು ಹಣ ಸಿಗಲಿದೆ ಹೇಳಿದ್ದ. ಹೀಗಾಗಿ, ಆರೋಪಿಯು ಸಹಚರರಜೊತೆ ಸೇರಿ ವಿಗ್ರಹವನ್ನು ವಿದೇಶಕ್ಕೆ ಮಾರಲೆಂದು ಬೆಂಗಳೂರಿಗೆ ಬಂದಿದ್ದ.’

‘ಮಧ್ಯವರ್ತಿಯೊಬ್ಬರ ಮೂಲಕ ವಿದೇಶಕ್ಕೆ ವಿಗ್ರಹ ಕಳುಹಿಸುವುದು ಆರೋಪಿಗಳ ಉದ್ದೇಶವಾಗಿತ್ತು. ನಗರದ ಹೋಟೆಲೊಂದರಲ್ಲಿ ಇರುವ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. ಪ್ರಮುಖ ಆರೋಪಿ ಶ್ರೀಕಾಂತ್‌ ಬಂಧನಕ್ಕೆ ಶೋಧ ನಡೆದಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.