ADVERTISEMENT

ಮೋದಿಯಿಂದ ಸಂವಿಧಾನಕ್ಕೆ ಕಂಟಕ: ಹಂಸಲೇಖ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 4:20 IST
Last Updated 26 ಆಗಸ್ಟ್ 2024, 4:20 IST
ಹಂಸಲೇಖ
ಹಂಸಲೇಖ   

ಬೆಂಗಳೂರು: ‘ಕೇರಳದ ಮಂದಿ ರಾಜಕೀಯ ಸೂಕ್ಷ್ಮಗಳನ್ನು ಥಟ್ಟನೆ ಗ್ರಹಿಸುತ್ತಾರೆ. ಕನ್ನಡಿಗರಿಗೆ ಅಂತಹ ಶಕ್ತಿ ಇಲ್ಲ. ನಾವು ಅದನ್ನು ರೂಢಿಸಿಕೊಳ್ಳಬೇಕು’ ಎಂದು ಹಂಸಲೇಖ ಹೇಳಿದರು.

ನಗರದ ಬಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಾಡು, ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ‘10 ವರ್ಷಗಳ ಹಿಂದೆ ಪ್ರಧಾನಿ ಮೋದಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸುವಾಗ ಸಂಸತ್ ಭವನಕ್ಕೆ ನಮಸ್ಕರಿಸಿದ್ದರು. ಆಗ ಆ ವ್ಯಕ್ತಿಗೆ ಎಷ್ಟು ವಿನಯ ಇದೆ ಎಂದು ಆಶ್ಚರ್ಯಪಟ್ಟಿದ್ದೆ. ಆದರೆ ನನ್ನ ಸೌಂಡ್ ಎಂಜಿನಿಯರ್‌ ಕೇರಳದವ. ಆತ ಇದು ಬರಿಯ ನಾಟಕ ಎಂದಿದ್ದ. ಸಂಸತ್ ಭವನಕ್ಕೆ ನಮಸ್ಕರಿಸಿದ್ದ ಮೋದಿ, ಸಂಸತ್ ಭವನವನ್ನೇ ಬದಲಿಸಿಬಿಟ್ಟರು. ಇದು ನಾಟಕ ಎಂಬುದನ್ನು ಕೇರಳದವರು ಮೊದಲೇ ಗ್ರಹಿಸಿದ್ದರು. ಅದು ನಿಜವಾಯಿತು. ಈ ಬಾರಿ ಸಂಸತ್ ಪ್ರವೇಶಿಸುವಾಗ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಖಂಡಿತಾ ಸಂವಿಧಾನ ಬದಲಿಸುತ್ತಾರೆ. ಕೇರಳದವರಿಗೆ ಇರುವಂತಹ ಜಾಗೃತಿ ನಮ್ಮಲ್ಲೂ ಇರಬೇಕು’ ಎಂದರು.

‘ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಸುಲಭದ ಕೆಲಸವಲ್ಲ. ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜತೆಗೆ ಆರ್‌ಎಸ್‌ಎಸ್‌ನ ಚಿಂತನ ಗಂಗಾ ಇರುತ್ತದೆ. ಭಾರತದ ವ್ಯವಸ್ಥೆಯ ಮೇಲೆ ಹೇಗೆ ದಾಳಿ ನಡೆಸಬೇಕು, ತಮಗೆ ಬೇಕಾದಂತೆ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅದು ಅವರಿಗೆ ಹೇಳಿಕೊಡುತ್ತದೆ. ಕನ್ನಡದ ಪಕ್ಷ ಕಟ್ಟುವವರಿಗೂ ಅಂತಹ ಒಂದು ಮಾರ್ಗಸೂಚಿಯ ಅವಶ್ಯಕತೆ ಇದೆ. ಅದು ಚಿಂತನ ಗಂಗಾದಂತಿರದೆ, ನಾಡನ್ನು ಕಟ್ಟುವಂತಿರಬೇಕು. ಪ್ರತಿಯೊಬ್ಬ ಕನ್ನಡಿಗನೂ ಸಂವಿಧಾನದ ಜತೆಗೆ, ಕನ್ನಡದ ಠರಾವನ್ನು ಇರಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.