ADVERTISEMENT

ಮಹಿಳೆಯರಿಗೆ ರಕ್ಷಣೆ ನೀಡದವರಿಗೆ ಮತ ಬೇಡ: ಸಮಾನ ಮನಸ್ಕ ಮಹಿಳೆಯರು ಕರ್ನಾಟಕ ಸಂಘಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:24 IST
Last Updated 21 ಏಪ್ರಿಲ್ 2024, 16:24 IST
ಮಹಿಳೆ
ಮಹಿಳೆ   

ಬೆಂಗಳೂರು: ಮಹಿಳೆಯರಿಗೆ ಘನತೆಯ ಬದುಕನ್ನು ಖಾತ್ರಿ ಪಡಿಸುವ ಸಂವಿಧಾನದ ಅಡಿಯಲ್ಲಿಯೇ ಮಹಿಳೆಯರನ್ನು ಹುರಿದು ಮುಕ್ಕುವ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ಪರೋಕ್ಷವಾಗಿ ಸಮರ್ಥನೆ ಮಾಡುವ, ಮಹಿಳೆಯರಿಗೆ ರಕ್ಷಣೆ ನೀಡದವರಿಗೆ ಮತ ಚಲಾಯಿಸಬಾರದು ಎಂದು ‘ಸಮಾನ ಮನಸ್ಕ ಮಹಿಳೆಯರು ಕರ್ನಾಟಕ‘ ಸಂಘಟನೆ ಒತ್ತಾಯಿಸಿದೆ. 

ಸಂಘಟನೆಯ ಡಾ.ವಸುಂಧರಾ ಭೂಪತಿ, ವಿಮಲಾ.ಕೆ.ಎಸ್, ಎಚ್.ಎಲ್. ಪುಷ್ಪಾ, ಇಂದಿರಾ ಕೃಷ್ಣಪ್ಪ, ಎನ್. ಗಾಯತ್ರಿ, ವಿಜಯಾ, ಗೀತಾ ಸುರತ್ಕಲ್, ಕೆ.ನೀಲಾ, ಬಸಮ್ಮ, ಪಾರ್ವತಮ್ಮ ಎಸ್.ಎಂ, ಸುಮತಿ. ಕೆ.ಆರ್, ಆರ್.ಕೆ. ಸರೋಜಾ, ಲಕ್ಷ್ಮಿ ಚಂದ್ರಶೇಖರ್, ಮೀನಾಕ್ಷಿ ಬಾಳಿ, ಎನ್. ಮಂಗಳಾ, ಕೆ. ಷರೀಫಾ, ಕೆ.ಎಸ್.ಲಕ್ಷ್ಮಿ, ಗೌರಮ್ಮ, ಸುಶೀಲಾ, ಎಚ್.ಜಿ. ಜಯಲಕ್ಷ್ಮಿ, ಕೆ.ಶಾಂತಕುಮಾರಿ, ಸಬೀಹಾ ಭೂಮಿಗೌಡ, ಡಾ.ರತಿ ರಾವ್ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ.

ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತಂದಾಗ ಸಂಭ್ರಮಿಸಿ, ಲೈಂಗಿಕ ಕಿರುಕುಳಕ್ಕೆ ಒಳಗಾದವರು ನ್ಯಾಯ ಕೇಳಿದಾಗ ಕಡೆಗಣಿಸಿ, ಆರೋಪಿಗಳ ರಕ್ಷಣೆಗೆ ನಿಂತವರು ಸಂವಿಧಾನದ ಘನತೆಯನ್ನು ಉಳಿಸಿಯಾರೇ? ದೇಶದ ಪ್ರಥಮ ಪ್ರಜೆಯಾಗಿದ್ದರೂ ಮಹಿಳೆ, ಆದಿವಾಸಿ ಮತ್ತು ಗಂಡ ಸತ್ತ ಮಹಿಳೆ ಎನ್ನುವ ಕಾರಣಕ್ಕೆ ಸಂಸತ್‌ ಭವನದ ಉದ್ಘಾಟನೆಗೆ ರಾಷ್ಟ್ರಪತಿಯನ್ನೇ ಆಹ್ವಾನಿಸದವರು ದೇಶದ ಸಾಮಾನ್ಯ ಮಹಿಳೆಯರಿಗೆ ಇನ್ನೇನು ಗೌರವ ನೀಡಬಲ್ಲರು ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮಹಿಳೆಯರು ಸಮಾನತೆಯ ಹೋರಾಟದಿಂದ ಪಡೆದಿರುವುದನ್ನು ಕಿತ್ತುಕೊಳ್ಳುವ ಸಂಚುಕಾರ, ಮನುವಾದಿ, ಕೋಮುವಾದಿ, ಸ್ತ್ರೀ ವಿರೋಧೀ ಪಕ್ಷ ಮತ್ತದರ ಮಿತ್ರ ಪಕ್ಷಗಳನ್ನು ತಿರಸ್ಕರಿಸುವುದೊಂದೇ ದಾರಿ ಉಳಿದಿದೆ. ದ್ವೇಷ ರಾಜಕಾರಣವನ್ನು ಸೋಲಿಸಲು ಸಂವಿಧಾನ ಉಳಿಸಲು ಬಿಜೆ‌ಪಿ ಮತ್ತದರ ಮಿತೃಪಕ್ಷಗಳನ್ನು ಸೋಲಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.