ಬೆಂಗಳೂರು: ನಗರದಲ್ಲಿ ಪ್ರತಿ ದಿನ ಒಂದು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳ ದೂರುಗಳು ‘ರಸ್ತೆ ಗುಂಡಿ ಗಮನ’ ಆ್ಯಪ್‌ನಲ್ಲಿ ದಾಖಲಾಗುತ್ತಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
‘ರಸ್ತೆ ಗುಂಡಿ ಗಮನ’ ಆ್ಯಪ್‌ನಲ್ಲಿ ಪ್ರತಿ ದಿನ 1,300ರಿಂದ 1,400 ದೂರುಗಳು ಬರುತ್ತಿವೆ. ಇದರಲ್ಲಿ ಸುಮಾರು 400 ದೂರುಗಳು ರಸ್ತೆ ಗುಂಡಿಗೆ ಸಂಬಂಧಿಸಿದ್ದಲ್ಲ ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ನಗರದಲ್ಲಿ ಪ್ರತಿನಿತ್ಯ 800 ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆ್ಯಪ್‌ನಿಂದ ಒಂದು ಸಾವಿರ ಗುಂಡಿಗಳ ಸಂಖ್ಯೆ ನಿತ್ಯವೂ ಸೇರ್ಪಡೆಯಾಗುತ್ತಿದೆ. ಆದರೂ ಇನ್ನೆರಡು ದಿನಗಳಲ್ಲಿ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು ಎಂದರು.
‘ಉಪ ಮುಖ್ಯಮಂತ್ರಿಯವರು ರಸ್ತೆ ಗುಂಡಿಗಳನ್ನು ಮುಚ್ಚಲು ಸೆಪ್ಟೆಂಬರ್ 21ರವರೆಗೆ ಗಡುವು ನೀಡಿದ್ದರು. ಅವರು ಗಡುವು ನೀಡಿದ್ದಾಗ 2,500 ರಸ್ತೆ ಗುಂಡಿಗಳಿದ್ದವು. ಆದರೆ ನಾವು ಈಗಾಗಲೇ 6,000 ಗುಂಡಿಗಳನ್ನು ಮುಚ್ಚಿದ್ದೇವೆ. ಉಪ ಮುಖ್ಯಮಂತ್ರಿಯವರು ಗಡುವು ನೀಡಿದ್ದಾಗ ಇದ್ದ ರಸ್ತೆ ಗುಂಡಿಗಳಿಂತ ಎರಡು ಪಟ್ಟು ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಹೊಸ ದೂರುಗಳೂ ಸೇರಿದಂತೆ ಮಂಗಳವಾರದವರೆಗೆ ಸುಮಾರು ಒಂದು ಸಾವಿರ ಗುಂಡಿಗಳು ಬಾಕಿ ಇದ್ದು, ಇನ್ನೆರಡು ದಿನದಲ್ಲಿ ಮುಚ್ಚಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಮುಖ್ಯಮಂತ್ರಿಯವರು ರಸ್ತೆ ಗುಂಡಿ ಮುಚ್ಚಲು ಸೆ.23ರವರೆಗೆ ಗಡುವು ನೀಡಿದ್ದರು. ಬಿಬಿಎಂಪಿ ಸೆ.17 ಅನ್ನು ತನ್ನದೇ ಗಡುವಾಗಿಸಿಕೊಂಡಿತ್ತು. ಎಂಜಿನಿಯರ್‌ಗಳು ಪತ್ತೆ ಹಚ್ಚಿರುವುದು ಹಾಗೂ ನಾಗರಿಕರ ದೂರುಗಳಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದರು.
ಕಳಪೆ ಮೇಲ್ಮೈ ದುರಸ್ತಿ: ರಸ್ತೆ ಗುಂಡಿಗಳನ್ನಷ್ಟೇ ಅಲ್ಲ, 32,200 ಚದರ ಮೀಟರ್ ಕಳಪೆ ರಸ್ತೆ ಮೇಲ್ಮೈಯನ್ನು (ಬ್ಯಾಡ್ ರೀಚಸ್) ದುರಸ್ತಿ ಮಾಡಲಾಗಿದೆ. ಸುಮಾರು 8,000 ಸ್ಥಳಗಳಲ್ಲಿ ನಾಲ್ಕು ಚದರ ಕಿ.ಮೀ ಕಳಪೆ ಮೇಲ್ಮೈಗೆ ಹಾಟ್‌ಮಿಕ್ಸ್ ಹಾಕಲಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
‘ಬಿಎಂಆರ್‌ಸಿಎಲ್ ಕಾಮಗಾರಿ ನಡೆಸುತ್ತಿರುವ ರಸ್ತೆಗಳ ಪಕ್ಕದ ಸರ್ವಿಸ್ ರಸ್ತೆಗಳನ್ನೂ ಅವರೇ ಅಭಿವೃದ್ಧಿ ಮಾಡಬೇಕೆಂಬ ಷರತ್ತು ಇತ್ತು. ಆದರೆ, ನಾಲ್ಕು ವರ್ಷದಿಂದ ಸರ್ವಿಸ್ ರಸ್ತೆಗಳನ್ನು ಬಿಬಿಎಂಪಿ ನಿರ್ವಹಿಸಬೇಕು ಎಂದು ಹೇಳಲಾಗಿದೆ. ₹240 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಡೆನ್ಸಿಟಿ ಕಾರಿಡಾರ್ ಯೋಜನೆಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕಿದೆ. ಇದಕ್ಕೆ ಸರ್ಕಾರದಿಂದ ಸ್ಪಷ್ಟತೆ ಬೇಕಿದೆ’ ಎಂದು ಹೇಳಿದರು.
ಸುರಂಗ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರ ಪ್ರಾರಂಭಿಸಬೇಕೆಂಬ ಉದ್ದೇಶವಿದೆ. ಇದರ ಪ್ರಕ್ರಿಯೆ ವೇಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಸೆ.1ರಿಂದ 6 ಸಾವಿರ ರಸ್ತೆ ಗುಂಡಿಗಳ ದುರಸ್ತಿ 32 ಸಾವಿರ ಚದರ ಮೀಟರ್ ರಸ್ತೆ ಮೇಲ್ಮೈಗೆ ಡಾಂಬರು ₹240 ಕೋಟಿ ವೆಚ್ಚದಲ್ಲಿ ಹೈಡೆನ್ಸಿಟಿ ಕಾರಿಡಾರ್ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.