ADVERTISEMENT

ಬೆಂಗಳೂರು: ಸಾವಿರಾರು ಬಿಪಿಎಲ್‌ ಪಡಿತರ ಚೀಟಿ ರದ್ದು

ನಾಗರಿಕರು ಸಾಲ ಪಡೆಯಲು ‘ಐಟಿ ರಿಟರ್ನ್‌’ ಸಲ್ಲಿಸಿರುವುದೇ ಪ್ರಮುಖ ಕಾರಣ!

ಆರ್. ಮಂಜುನಾಥ್
Published 26 ಅಕ್ಟೋಬರ್ 2024, 0:16 IST
Last Updated 26 ಅಕ್ಟೋಬರ್ 2024, 0:16 IST
ಬಿಪಿಎಲ್‌ ಕಾರ್ಡ್‌ ರದ್ದಾಗಿರುವುದನ್ನು ವಿರೋಧಿಸಿ ನಾಗರಿಕರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು
ಬಿಪಿಎಲ್‌ ಕಾರ್ಡ್‌ ರದ್ದಾಗಿರುವುದನ್ನು ವಿರೋಧಿಸಿ ನಾಗರಿಕರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ನಗರದಲ್ಲಿ ಸಾವಿರಾರು ಕುಟುಂಬಗಳ ಬಿಪಿಎಲ್‌ ಪಡಿತರ ಚೀಟಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಪಡಿಸಲಾಗಿದೆ. ಅರ್ಹ ಫಲಾನುಭವಿಗಳ ಬಿಪಿಎಲ್‌ ಪಡಿತರ ಚೀಟಿಗಳನ್ನೂ ತೆಗೆದುಹಾಕಲಾಗಿದ್ದು, ದಿನಸಿ ಇಲ್ಲದೆ ನಾಗರಿಕರು ಪರಿತಪಿಸುತ್ತಿದ್ದಾರೆ.

ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿದ್ದ ನಾಗರಿಕರು, ದಿನಸಿ ಪಡೆಯಲು ಪಡಿತರ ಅಂಗಡಿಗಳಿಗೆ ತೆರಳಿದಾಗ ‘ನಿಮ್ಮ ಬಿಪಿಎಲ್‌ ಕಾರ್ಡ್‌ ರದ್ದಾಗಿದೆ’ ಅಥವಾ ‘ನಿಮ್ಮ ಬಿಪಿಎಲ್‌ ಕಾರ್ಡ್‌ ಎಪಿಎಲ್‌ ಕಾರ್ಡ್‌ ಆಗಿದೆ’ ಎಂಬ ಉತ್ತರ ಸಿಕ್ಕಿದೆ. ‘ಈ ಕಾರಣದಿಂದ ದಿನಸಿ ನೀಡಲು ಸಾಧ್ಯವಿಲ್ಲ’ ಎಂದು ಅಂಗಡಿ ಮಾಲೀಕರು ಅವರಿಗೆ ತಿಳಿಸುತ್ತಿದ್ದಾರೆ.

ಏಕಾಏಕಿ ಬಿಪಿಎಲ್‌ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಆತಂಕಗೊಂಡಿರುವ ನೂರಾರು ನಾಗರಿಕರು, ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ADVERTISEMENT

‘ನಾನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಅಂಗವಿಕಲೆ. ನನಗೆ ಹೆಚ್ಚಿನ ಆದಾಯ ಇಲ್ಲ. ಬಿಪಿಎಲ್‌ ಕಾರ್ಡ್‌ ಅನ್ನು ರದ್ದು ಮಾಡಿದ್ದಾರೆ. ಇಲ್ಲಿನ ಕಚೇರಿಯಲ್ಲಿ ಕೇಳಿದರೆ ‘ಐಟಿ ರಿಟರ್ನ್‌ ಮಾಡಿದ್ದೀರ, ಅದಕ್ಕೆ ರದ್ದಾಗಿದೆ’ ಎನ್ನುತ್ತಾರೆ. ನಾವು ಯಾವುದೇ ರೀತಿಯಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸಿಲ್ಲ. ಆದಾಯ ತೆರಿಗೆ ಕಚೇರಿಯಿಂದ ಪತ್ರ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ತೆರಿಗೆ ಇಲಾಖೆಗೆ ಹೋದರೆ ಅವರು, ‘ನೀವು ತೆರಿಗೆ ಕಟ್ಟಿಲ್ಲ. ಯಾವ ಪತ್ರವನ್ನೂ ಕೊಡಲು ಸಾಧ್ಯವಿಲ್ಲ’ ಎನ್ನುತ್ತಾರೆ. ಅವರ ಕಾಲಿಗೆ ಬಿದ್ದು ಕೇಳಿಕೊಂಡೆ. ಆಹಾರ ಇಲಾಖೆಯಿಂದ ಪತ್ರ ತೆಗೆದುಕೊಂಡು ಬನ್ನಿ ಅನ್ನುತ್ತಾರೆ. ಆಹಾರ ಇಲಾಖೆಯ ಅಧಿಕಾರಿಗಳು ಭೇಟಿಗೆ ಸಿಗುತ್ತಿಲ್ಲ’ ಎಂದು ಕೆಂಗೇರಿಯ ಪಲ್ಲವಿ ದೂರಿದರು.

‘ನಾನು ಮನೆ ಮನೆಯಲ್ಲಿ ಕೆಲಸ ಮಾಡುತ್ತೇನೆ. ನಾನು ಹೇಗೆ ತೆರಿಗೆ ಕಟ್ಟಲಿ. ಬಿಪಿಎಲ್‌ ಕಾರ್ಡ್‌ನ ಅಕ್ಕಿ, ದಿನಸಿ ಸಿಗದಿದ್ದರೆ ನಾವು ಹಸಿವಿನಿಂದ ಸಾಯಬೇಕಾಗುತ್ತದೆ. ಕೆ.ಜಿ.ಗೆ ₹50, ₹60 ಕೊಟ್ಟು ಅಕ್ಕಿ ಖರೀದಿಸಲು ನಮಗೆ ಸಾಧ್ಯವಿಲ್ಲ’ ಎಂದು ಯಲಹಂಕದ ಕಮಲಾ ಅಳಲು ತೋಡಿಕೊಂಡರು.

‘ಬಿಪಿಎಲ್‌ ಕಾರ್ಡ್‌ ರದ್ದಾಗಿದೆ. ನಮಗೆ ಯಾವುದೇ ಹೆಚ್ಚಿನ ಆದಾಯ ಇಲ್ಲ. ಅದನ್ನು ಹೇಳಲು ಜಿಲ್ಲಾಧಿಕಾರಿ ಕಚೇರಿ ಹಾಗೂ ಆಹಾರ ಇಲಾಖೆಯ ನಗರ ವಿಭಾಗದ ಅಧಿಕಾರಿಗಳ ಕಚೇರಿಗಳಿಗೆ ಅಲೆಯುತ್ತಿದ್ಧೇನೆ. ಆಧಾರ್‌, ಪ್ಯಾನ್‌, ಬಿಪಿಎಲ್‌ ಪಡಿತರ ಚೀಟಿಯ ಪ್ರತಿ ನೀಡಿ ಹೋಗಿ ಎನ್ನುತ್ತಿದ್ದಾರೆ. ಆದರೆ, ಈ ತಿಂಗಳು ಅಕ್ಕಿ, ದಿನಸಿ ಸಿಗದಿದ್ದರೆ ನಾವು ಏನು ತಿನ್ನುವುದು’ ಎಂದು ರಾಧಾ, ಅಮ್ಮಯಮ್ಮ, ತಿಪ್ಪಣ್ಣ, ಸುರೇಶ್‌ ಎಂಬುವವರು ಪ್ರಶ್ನಿಸಿದರು.

‘ಕುಟುಂಬ ತಂತ್ರಾಂಶ’ಕ್ಕೆ ಮಾಹಿತಿ ‘

ನಾಗರಿಕರು ದ್ವಿಚಕ್ರ ವಾಹನ ಖರೀದಿಗೆ ಸಾಲ ಹಾಗೂ ಇತರೆ ಅಗತ್ಯಗಳಿಗೆ ಏಜೆನ್ಸಿಗಳಿಂದ ಸಾಲ ಪಡೆದುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ತೆರಿಗೆ ಇಲಾಖೆಗೆ ನೀಡಬೇಕಾದ ಮಾಹಿತಿಗಳಲ್ಲಿ ‘ಟಿಕ್‌’ ಮಾಡಿರುತ್ತಾರೆ. ಇದು ಅವರ ಗಮನಕ್ಕೆ ಬಂದಿರುವುದಿಲ್ಲ. ಕೆಲವರು ಸಾಲ ಪಡೆಯಲು ಆಡಿಟರ್‌ಗಳ ಮೂಲಕ ‘ಐಟಿ ರಿಟರ್ನ್‌’ ದಾಖಲೆಗಳನ್ನು ಪಡೆದುಕೊಂಡಿರುತ್ತಾರೆ. ಇವೆಲ್ಲ ಮಾಹಿತಿಗಳು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ‘ಕುಟುಂಬ ತಂತ್ರಾಂಶ’ಕ್ಕೆ ಆನ್‌ಲೈನ್‌ನಲ್ಲೇ ಅಪ್‌ಡೇಟ್‌ ಆಗುತ್ತದೆ. ಸಂಬಂಧಿಸಿದ ಆಹಾರ ನಿರೀಕ್ಷಕರು ಅದನ್ನು ಪರಿಶೀಲಿಸಿ ಬಿಪಿಎಲ್‌ ಪಡಿತರ ಚೀಟಿಗೆ ಕುಟುಂಬ ಅರ್ಹವಿಲ್ಲ ಎಂದು ತೀರ್ಮಾನಿಸಿರುತ್ತಾರೆ. ಅದರಂತೆ ರದ್ದುಪಡಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ‘ನಾಗರಿಕರು ಸಾಲ ಪಡೆಯುವಾಗ ಏಜೆನ್ಸಿ ಬ್ಯಾಂಕ್‌ ಅಥವಾ ಇತರೆ ಸಂಸ್ಥೆಗಳು ನೀಡುವ ಸಾಲದ ಅರ್ಜಿಯನ್ನು ಪೂರ್ಣವಾಗಿ ಪರಿಶೀಲಿಸಿರುವುದಿಲ್ಲ.

ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಲವು ‘ಟಿಕ್‌’ಗಳನ್ನು ಅವರ ಅರಿವಿಗೆ ಬಾರದಂತೆಯೇ ಮಾಡಲಾಗಿರುತ್ತದೆ. ಈಗೆಲ್ಲ ಆನ್‌ಲೈನ್‌ ಪ್ರಕ್ರಿಯೆಯಾಗಿರುವುದರಿಂದ ಆಧಾರ್‌ ಹಾಗೂ ಪ್ಯಾನ್‌ ಲಿಂಕ್‌ ಆಗಿರುವುದರಿಂದ ಅವರ ಖಾತೆಗೆ ಎಲ್ಲವೂ ದಾಖಲಾಗುತ್ತದೆ. ಸಾಲಕ್ಕಾಗಿ ಹೆಚ್ಚು ಆದಾಯ ತೋರಿಸಿರುವುದರಿಂದ ಬಿಪಿಎಲ್‌ ಪಡಿತರ ಚೀಟಿಗೆ ಅವರು ಅನರ್ಹರಾಗುತ್ತಾರೆ. ಹೀಗಾಗಿ ಸಾವಿರಾರು ಬಿಪಿಎಲ್‌ ಪಡಿತರ ಚೀಟಿಗಳು ರದ್ದಾಗಿವೆ. ಕೆಲವು ಅರ್ಹ ಫಲಾನುಭವಿಗಳ ಕಾರ್ಡ್‌ಗಳೂ ರದ್ದಾಗಿದ್ದು ಇದೆಲ್ಲವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಬೇಕಿದೆ’ ಎಂದು ವಿವರಿಸಿದರು. ಈ ಬಗ್ಗೆ ಆಹಾರ ಇಲಾಖೆಯ ಬೆಂಗಳೂರು ನಗರದ ಉಪ ನಿರ್ದೇಶಕ ಶಾಂತಗೌಡ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.