ADVERTISEMENT

ಪೋಕ್ಸೊ ಸಂತ್ರಸ್ತೆಗೆ ಬೆದರಿಕೆ: ಮಂಜುನಾಥ ಸ್ವಾಮೀಜಿ ವಿರುದ್ಧದ ವಿಚಾರಣೆಗೆ HC ತಡೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:47 IST
Last Updated 2 ಜುಲೈ 2024, 14:47 IST
<div class="paragraphs"><p>ಬಾಲ ಮಂಜುನಾಥ ಸ್ವಾಮೀಜಿ</p></div>

ಬಾಲ ಮಂಜುನಾಥ ಸ್ವಾಮೀಜಿ

   

ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಪ್ರಕರಣದಲ್ಲಿನ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀ ಮಠ) ಬಾಲ ಮಂಜುನಾಥ ಸ್ವಾಮೀಜಿ (36) ವಿರುದ್ಧದ ವಿಚಾರಣಾ ಕೋರ್ಟ್‌ನ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಕುರಿತಂತೆ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರ ಸ್ವಾಮೀಜಿ ಪರ ವಕೀಲೆ ಲೀಲಾ ಪಿ.ದೇವಾಡಿಗ, ‘ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಆಧಾರರಹಿತ ಮತ್ತು ಕಾನೂನು ಬಾಹಿರವಾಗಿದೆ. ಮೇಲ್ನೋಟಕ್ಕೆ ಇದು ದುರುದ್ದೇಶಪೂರಿತ ಮತ್ತು ಸುಳ್ಳು ಅಂಶಗಳಿಂದ ಆವೃತವಾಗಿದೆ. ಸ್ವಾಮೀಜಿಯ ವ್ಯಕ್ತಿತ್ವಕ್ಕೆ ಮತ್ತು ಕೀರ್ತಿಗೆ ಧಕ್ಕೆ ತರುವಂತಿದೆ’ ಎಂದು ಬಲವಾಗಿ ಆಕ್ಷೇಪಿಸಿದರು. 

‘ಸ್ವಾಮೀಜಿ ಸಂತ್ರಸ್ತ ಬಾಲಕಿಗೆ ಯಾವುದೇ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ದೂರಿನಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ಪ್ರಾಸಿಕ್ಯೂಷನ್‌ ವಿನಾಕಾರಣ ದೂರಿನ ವ್ಯಾಪ್ತಿಯಿಂದ ಆಚೆಗೆ ಸಲ್ಲದ ಆರೋಪಗಳನ್ನು ಹೊರಿಸುತ್ತಿದೆ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಮತ್ತು ಕುಣಿಗಲ್‌ನ ಹೆಚ್ಚುವರಿ ಸಿವಿಲ್‌ ಜಡ್ಜ್‌ (ಹಿರಿಯ ವಿಭಾಗ) ಮತ್ತು ಸಿಜೆಎಂ ಕೋರ್ಟ್‌ನಲ್ಲಿ ಇರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದರು.  ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣಾ ಕೋರ್ಟ್‌ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣವೇನು?: ಹುಲಿಯೂರು ದುರ್ಗ–ಮಾಗಡಿ ರಸ್ತೆಯಲ್ಲಿರುವ ಕಾಡು ಶನೈಶ್ಚರ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ಮಂಜುನಾಥ ಸ್ವಾಮೀಜಿ 2016ರಲ್ಲಿ ಹಂಗರಹಳ್ಳಿಯಲ್ಲಿ ಶನೈಶ್ಚರ ಪೂಜೆ ಶುರು ಮುಖಾಂತರವೇ ವಿದ್ಯಾ ಚೌಡೇಶ್ವರಿ ದೇವಸ್ಥಾನ ಮತ್ತು ಮಠ ನಿರ್ಮಿಸಿ ಖ್ಯಾತಿ ಪಡೆದಿದ್ದಾರೆ. ಇವರ ವಿರುದ್ಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ 2024ರ ಮಾರ್ಚ್‌ 7ರಂದು ನೀಡಲಾದ ದೂರಿನ ಅನುಸಾರ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ದಾಖಲಾಗಿತ್ತು.

‘ದೂರು ನೀಡಿದ ಬಾಲಕಿಗೆ ಸ್ವಾಮೀಜಿ ಸಾಕ್ಷ್ಯ ಒದಗಿಸದಂತೆ ಬೆದರಿಕೆ ಹಾಕಿದ್ದಾರೆ’ ಎಂಬ ಆರೋಪದಡಿ, ಭಾರತೀಯ ದಂಡ ಸಂಹಿತೆ–1860ರ ಕಲಂ 195ಎ (ಸುಳ್ಳು ಸಾಕ್ಷ್ಯ ನೀಡುವಂತೆ ವ್ಯಕ್ತಿಗೆ ಬೆದರಿಕೆ) 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 506 (ಕ್ರಿಮಿನಲ್‌ ಬೆದರಿಕೆ) 34 (ಸಾಮಾನ್ಯ ಉದ್ದೇಶದಿಂದ ಹಲವು ವ್ಯಕ್ತಿಗಳು ಕೂಡಿ ಮಾಡಿದ ಅಪರಾಧ) ಅನುಸಾರ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.