ADVERTISEMENT

ಬೆಂಗಳೂರು | ಎಸ್‌ಪಿಗೆ ಬೆದರಿಕೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 15:53 IST
Last Updated 7 ಜನವರಿ 2024, 15:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಐಪಿಎಸ್‌ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ದ್ವಿಚಕ್ರ ವಾಹನ ಸವಾರನನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಾಣವಾರದ ಎಜಿಬಿ ಲೇಔಟ್‌ ನಿವಾಸಿ ಜಿ.ಅಭಿಷೇಕ್‌(22) ಬಂಧಿತ ಸವಾರ.

ADVERTISEMENT

ಜನವರಿ 3ರಂದು ಬೆಳಿಗ್ಗೆ 10.15ರ ಸುಮಾರಿಗೆ ಗೊರಗುಂಟೆಪಾಳ್ಯ ಟ್ರಾಫಿಕ್‌ ಸಿಗ್ನಲ್‌ ಬಳಿ ಈ ಘಟನೆ ನಡೆದಿತ್ತು.

‘ಬಿ.ಬಿ.ಎಂ.ಪಿ ಬೆಂಗಳೂರು ಮಹಾನಗರ ಕಾರ್ಯಪಡೆಯ ಎಸ್‌.ಪಿ ಆಗಿರುವ ಶೋಭಾರಾಣಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಶೋಭಾರಾಣಿ ಅವರು ಸರ್ಕಾರಿ ಕಾರಿನಲ್ಲಿ ಅಂದು ಮನೆಯಿಂದ ಕಚೇರಿಗೆ ಹೊರಟಿದ್ದರು. ಗೊರಗುಂಟೆಪಾಳ್ಯದ ಟ್ರಾಫಿಕ್‌ ಸಿಗ್ನಲ್‌ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಅಭಿಷೇಕ್‌ ಎಂಬಾತ ಎಸ್‌ಪಿ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ, ಕೆಳಗೆ ಇಳಿದು ಪರಿಶೀಲಿಸುವಾಗ, ದ್ವಿಚಕ್ರ ವಾಹನ ಸವಾರ ಚಾಲಕನನ್ನು ನಿಂದಿಸಲು ಆರಂಭಿಸಿದ್ದ. ಇದನ್ನು ಗಮನಿಸಿದ ಶೋಭಾರಾಣಿ ಅವರು ದ್ವಿಚಕ್ರ ವಾಹನ ಸವಾರನಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಆಗ ಕೆರಳಿದ ಆರೋಪಿ, ಮಹಿಳಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ಗಳಿಂದ ನಿಂದಿಸಿದ್ದ. ಕರ್ತವ್ಯಕ್ಕೆ ಹೋಗದಂತೆ ಅಡ್ಡಿಪಡಿಸಿದ್ದ. ಅಧಿಕಾರಿ ನೀಡಿದ ದೂರು ಆಧರಿಸಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.