ಬೆಂಗಳೂರು: ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿಸ್ವಾಮಿ ಅವರಿಗೆ ಬೆದರಿಕೆ ಹಾಕಿ, ₹ 6 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವಿಜಯಪುರ ವಿದ್ಯಾ ಬಿರಾದರ್ ಪಾಟೀಲ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.
‘ಆಗಸ್ಟ್ 31ರಂದು ಸ್ವಾಮೀಜಿ ಅವರಿಗೆ ಕರೆ ಮಾಡಿದ್ದ ಆರೋಪಿ ಮಹಿಳೆ, ತಾನು ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಮತ್ತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಸಹೋದರಿ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು. ಡಿ.ಬಿ.ಪಲ್ಲವಿ ಹಾಗೂ ಸೂರ್ಯನಾರಾಯಣ ಎಂಬುವರು ನಿಮಗೆ ಸಂಬಂಧಿಸಿದ ವಿಡಿಯೊ ತುಣುಕು ಹಾಗೂ ದೂರಿನ ಪತ್ರ ನೀಡಿ, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂಬುದಾಗಿ ಬೆದರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಂಗಳೂರಿನ ಗಾಂಧಿ ನಗರದ ರಾಮಕೃಷ್ಣ ಹೋಟೆಲ್ ಬಳಿ ಸ್ವಾಮೀಜಿ ಅವರ ಕಾನೂನು ಸಲಹೆಗಾರ ಧನಂಜಯ್ ಅವರನ್ನು ಭೇಟಿ ಮಾಡಿದ್ದ ಮಹಿಳೆ, ಸ್ವಾಮೀಜಿ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳಿದ್ದು, ಅದನ್ನು ಬಹಿರಂಗಪಡಿಸದೇ ಇರಲು ₹ 6 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಹರಿಯಬಿಡುವುದಾಗಿ ಬೆದರಿಸಿದ್ದರು. ಸ್ವಾಮೀಜಿ ಈ ಬಗ್ಗೆ ದೂರು ದಾಖಲಿಸಿದ್ದರು’ ಎಂದು ಹೇಳಿದ್ದಾರೆ.
‘ವರ್ತೂರಿನ ವಿದ್ಯಾರಣ್ಯಪುರಂ ಮನೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಮಹಿಳೆಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದ್ದು, ಅಶ್ಲೀಲ ವಿಡಿಯೊಗಳು ಪತ್ತೆಯಾಗಿವೆ. ಅವುಗಳ ನೈಜತೆ ಪರಿಶೀಲಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಆರೋಪಿಯು ರಾಜಕೀಯ ಪಕ್ಷವೊಂದರಿಂದ ವಿಜಯಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದರು’ ಎಂದು ತಿಳಿಸಿದರು.
‘ಸ್ವಾಮೀಜಿ ವಿರುದ್ಧ ಕೆಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಮಾಡುತ್ತಿದ್ದೇನೆ ಹೊರತು ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ವಿದ್ಯಾ ವಿಚಾರಣೆ ವೇಳೆ ತಿಳಿಸಿದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.