ADVERTISEMENT

ಬೆಂಗಳೂರು: ಗುತ್ತಿಗೆದಾರನಿಗೆ ಬೆದರಿಕೆ; ಏಳು ಅಧಿಕಾರಿಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 22:52 IST
Last Updated 15 ಜನವರಿ 2024, 22:52 IST
   

ಬೆಂಗಳೂರು: ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದ ಗುತ್ತಿಗೆದಾರನಿಗೆ ಜೀವಬೆದರಿಕೆ ಹಾಕಿದ ಆರೋಪದಡಿ ಕೆಆರ್‌ಐಡಿಎಲ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಏಳು ಅಧಿಕಾರಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಶ್ರೀಹರಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿ. ಶ್ರೀಧರ್, ಲಕ್ಷ್ಮಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಎಚ್. ಮಾರಂಗಪ್ಪ, ಇಲಾಖೆಯ ಸಾಮಾಜಿಕ ಲೆಕ್ಕಪರಿಶೋಧನೆ ವಿಭಾಗದ ನಿವೃತ್ತ ನಿರ್ದೇಶಕ ಕೆ.ಎಚ್. ನಾಗರಾಜ್‌, ಜಂಟಿ ಕಾರ್ಯದರ್ಶಿ ಸಿದ್ದೇಶ್ ಪೋತಲಕಟ್ಟಿ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮುಕ್ಕಣ್ಣ ನಾಯಕ್‌ ವಿರುದ್ಧ ನಗರದ ಐದನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್‌ ದಾಖಲಿಸಲಾಗಿದೆ.

ಏಳು ಮಂದಿಯ ವಿರುದ್ಧ ಲೋಕಾಯುಕ್ತರು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಿಗೆ ದೂರು ನೀಡಿದ್ದು, ಅದನ್ನು ಹಿಂಪಡೆಯುವಂತೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿಯಾಗಿರುವ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಕೆ. ಮೋಹನ್ ಕುಮಾರ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಐದನೇ ಎಸಿಎಂಎಂ ನ್ಯಾಯಾಲಯ, ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ಆದೇಶಿಸಿತ್ತು.

ADVERTISEMENT

‘ಲೋಕಾಯುಕ್ತ ಹಾಗೂ ಇಲಾಖೆಯ ಸಚಿವರಿಗೆ ದೂರು ನೀಡಿದ್ದ ಕಾರಣಕ್ಕೆ ಮೋಹನ್‌ ಕುಮಾರ್‌ ಅವರಿಗೆ ಅಧಿಕಾರಿಗಳು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.