ADVERTISEMENT

ಸಹೋದ್ಯೋಗಿ ಕೊಲೆಗೆ ₹1 ಲಕ್ಷಕ್ಕೆ ಸುಪಾರಿ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 16:23 IST
Last Updated 10 ಏಪ್ರಿಲ್ 2024, 16:23 IST
ಶ್ರೀಧರ್
ಶ್ರೀಧರ್   

ಬೆಂಗಳೂರು: ಸಹೋದ್ಯೋಗಿಯ ಕೊಲೆಗೆ ಸುಪಾರಿ ಪಡೆದು ಕೊಲೆಗೆ ಯತ್ನಿಸಿದ ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯದ ಮುಖ್ಯಸ್ಥ ಸೇರಿದಂತೆ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌. ಪುರಂ ಮೆಡಹಳ್ಳಿ ವಿನಾಯನಗರದ ನಿವಾಸಿ, ಆಸ್ಪತ್ರೆ ಪ್ರಯೋಗಾಲಯದ ಮುಖ್ಯಸ್ಥ ಶ್ರೀಧರ್‌, ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಂಬತ್ತನಹಳ್ಳಿಯ ಸಿದ್ದೇಶ್‌ ಹಾಗೂ ಶಿವಮೊಗ್ಗದ ಅಶೋನಗರದ ಜನತಾ ಕಾಲೊನಿ ನಿವಾಸಿ ನಿತೇಶ್‌ ಬಂಧಿತ ಆರೋಪಿಗಳು.

‘ಏಪ್ರಿಲ್‌ 3ರಂದು ಸುಂಕದಕಟ್ಟೆ ಹೊಯ್ಸಳ ನಗರದ ನಿವಾಸಿ, ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಚಂದ್ರಕಾಂತ್‌ (30) ಅವರು ಕೆಲಸಕ್ಕೆಂದು ಸುಂಕದಕಟ್ಟೆಯ ವಿನೋದಪ್ಪ ಬೇಕರಿ ರಸ್ತೆಯಲ್ಲಿ ನಡೆದು ತೆರಳುತ್ತಿದ್ದರು. ಆಗ, ಏಕಾಏಕಿ ಎದುರು ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಚಂದ್ರಕಾಂತ್‌ ಅಪಾಯದಿಂದ ಪಾರಾಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಶ್ರೀಧರ್ ಹಾಗೂ ಚಂದಕಾಂತ್‌ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಶ್ರೀಧರ್, ಕಿದ್ವಾಯಿ ಆಸ್ಪತ್ರೆಯಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಜತೆ ಚಂದ್ರಕಾಂತ್ ಹೆಚ್ಚು ಮಾತನಾಡಿದ್ದರು. ಈ ಸಂಬಂಧ ಹಿಂದೆ ಒಂದೆರಡು ಬಾರಿ ಚಂದ್ರಕಾಂತ್‌ಗೆ ಶ್ರೀಧರ್ ಎಚ್ಚರಿಕೆ ನೀಡಿದ್ದ. ಆದರೆ, ಚಂದ್ರಕಾಂತ್, ಸಹೋದ್ಯೋಗಿ ಮಾತಾಡಿಸುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದ. ಅಂದಿನಿಂದ ಶ್ರೀಧರ್ ಹಾಗೂ ಚಂದ್ರಕಾಂತ್ ನಡುವೆ ವೈಮನಸ್ಸು ಆರಂಭವಾಗಿತ್ತು. ಕೊಲೆಗೆ ಸಂಚು ರೂಪಿಸಿದ್ದ. ಈ ಮಧ್ಯೆ ಪರಿಚಯಸ್ಥ ಸಿದ್ದೇಶ್‌ಗೆ ಘಟನೆ ಕುರಿತು ವಿವರಿಸಿದ್ದ. ಈ ಕೆಲಸ ಮಾಡಿಕೊಟ್ಟರೆ, ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದ. ಅದರಂತೆ ಸಿದ್ದೇಶ್‌ ಹಾಗೂ ನಿತೇಶ್‌ ಯೋಜನೆ ರೂಪಿಸಿದ್ದರು. ಕೊಲೆಗೆ ₹1 ಲಕ್ಷಕ್ಕೆ ಸುಪಾರಿ ಪಡೆದುಕೊಂಡಿದ್ದರು. ಸುಂಕದಕಟ್ಟೆಯಲ್ಲಿ ಚಂದ್ರಕಾಂತ್ ಅವರು ನಡೆದು ತೆರಳುತ್ತಿದ್ದ ವೇಳೆ ಕೊಲೆಗೆ ಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.