ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮಾಹಿತಿ ಮೇರೆಗೆ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಖಲೀಲ್ ಚಪರಾಸಿ, ಅಬ್ದುಲ್ ಖಾದರ್, ಮೊಹಮ್ಮದ್ ಜಹೀದ್ ಬಂಧಿತರು.
ಆರೋಪಿಗಳು ಸುಮಾರು ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬೆಳ್ಳಂದೂರಿನಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದರು.
ಖಲೀಲ್ ಮತ್ತು ಮೊಹಮ್ಮದ್ ಜಹೀದ್ ಹೌಸ್‌ಕೀಪಿಂಗ್ ಹಾಗೂ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು. ಅಕ್ರಮವಾಗಿ ಗಡಿಭಾಗದಲ್ಲಿ ಮಧ್ಯಸ್ಥರ ಮೂಲಕ ದೇಶಕ್ಕೆ ಬಂದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಅಬ್ದುಲ್ ಖಾದರ್ ಬಳಿ ಪಾಸ್‌ಪೋರ್ಟ್, ವೀಸಾ ಪತ್ತೆಯಾಗಿವೆ. ಈತ ಆಗಾಗ್ಗೆ ನಗರಕ್ಕೆ ಬಂದು ಹೋಗುತ್ತಿದ್ದ. ಬಾಂಗ್ಲಾದೇಶದಿಂದ ನಾಗರಿಕರನ್ನು ಅಕ್ರಮವಾಗಿ ದೇಶದ ಗಡಿದಾಟಿಸುತ್ತಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಅದರ ಆಧಾರದ ಮೇಲೆ ಬಂಧಿಸಲಾಗಿದೆ. ವಿದೇಶಿ ಕಾಯ್ದೆ ಉಲ್ಲಂಘನೆ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸುಳಿವು ನೀಡಿದ್ದ ಎನ್‌ಐಎ: ಎನ್‌ಐಎ ಅಧಿಕಾರಿಗಳು ಪ್ರಕರಣವೊಂದರಲ್ಲಿ ತನಿಖೆ ನಡೆಸುವಾಗ ಆರೋಪಿಗಳು ಅಕ್ರಮವಾಗಿ ನುಸುಳಿ ಬಂದಿರುವ ಸುಳಿವು ಸಿಕ್ಕಿತ್ತು. ಆ ಮಾಹಿತಿಯನ್ನು ಬೆಳ್ಳಂದೂರು ಪೊಲೀಸರಿಗೂ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.