ಬೆಂಗಳೂರು: ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2023 ಬುಧವಾರದಿಂದ ಆರಂಭವಾಗಲಿದೆ. 30ಕ್ಕೂ ಹೆಚ್ಚು ರಾಷ್ಟ್ರಗಳ ತಂತ್ರಜ್ಞರು, ಸಂಶೋಧಕರು, ನವೋದ್ಯಮಗಳ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 26ನೇ ಆವೃತ್ತಿ. ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಈ ಬಾರಿಯ ಶೃಂಗಸಭೆ ನಡೆಯಲಿದ್ದು, ಸಕಲ ಸಿದ್ಧತೆ ನಡೆದಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆಗಳಿಗೂ ಸಭೆ ವೇದಿಕೆಯಾಗಲಿದೆ.
ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2023’ ಉದ್ಘಾಟಿಸುವರು. ಕಝಕಿಸ್ತಾನದ ಡಿಜಿಟಲ್ ಅಭಿವೃದ್ಧಿ, ನಾವೀನ್ಯತೆ ಮತ್ತು ವೈಮಾನಿಕ ಉದ್ಯಮ ಖಾತೆ ಸಚಿವ ಬಾಗ್ದೋತ್ ಮುಸ್ಸಿನ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಎಎಂಡಿ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್‌ಮಾಸ್ಟರ್, ವಿಪ್ರೊ ಕಾರ್ಯನಿರ್ವಾಹಕ ನಿರ್ದೇಶಕ ರಿಷಾದ್ ಪ್ರೇಮ್‌ಜಿ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
75ಕ್ಕೂ ಹೆಚ್ಚು ಗೋಷ್ಠಿ: ಈ ಬಾರಿಯ ಶೃಂಗಸಭೆಯಲ್ಲಿ 75ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ. ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್, ಗುಪ್ತಚರ ಮತ್ತು ವೈಮಾನಿಕ ಕ್ಷೇತ್ರ, ಔಷಧ ಸಂಶೋಧನೆ ಮತ್ತು ಉತ್ಪಾದನೆ, ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನದ ಬಳಕೆ, ನವೋದ್ಯಮಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಿವೆ.
ಗೋಷ್ಠಿಗಳಲ್ಲಿ ಇನ್ಫೊಸಿಸ್‌ನ ಎನ್.ಆರ್. ನಾರಾಯಣಮೂರ್ತಿ, ಬಯೋಕಾನ್‌ನ ಕಿರಣ ಮಜುಂದಾರ್ ಷಾ ಪಾಲ್ಗೊಳ್ಳಲಿದ್ದಾರೆ.
350ಕ್ಕೂ ಹೆಚ್ಚು ಮಂದಿ ಅಂತರರಾಷ್ಟ್ರೀಯ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗೋಷ್ಠಿಗಳಲ್ಲಿ ವಿಷಯ ಮಂಡಿಸುವರು. ವಸ್ತುಪ್ರದರ್ಶನಕ್ಕೂ ವ್ಯವಸ್ಥೆ ಮಾಡಿದ್ದು, 350ಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ಸಂಶೋಧನೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ವಸ್ತುಪ್ರದರ್ಶನ ವಿಭಾಗದಲ್ಲಿ ಒಟ್ಟು 600 ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ.
ನವೋದ್ಯಮಗಳ 2,000 ಪ್ರತಿನಿಧಿಗಳು ಸೇರಿದಂತೆ 20,000ಕ್ಕೂ ಹೆಚ್ಚು ಮಂದಿ ಈ ಶೃಂಗಸಭೆಯ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. 50,000ಕ್ಕೂ ಹೆಚ್ಚು ಮಂದಿ ಶೃಂಗಸಭೆಗೆ ಭೇಟಿ ನೀಡುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.