ಬೆಂಗಳೂರು: ಉತ್ತರ ಭಾಗದ ಬೆಂಗಳೂರಿಗೆ ಕಾವೇರಿ ನೀರು ಪೂರೈಸಲು ನಡೆಯುತ್ತಿರುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯು ಮಾಗಡಿ ರಸ್ತೆಯ ತುಂಗಾನಗರ, ಅಂದ್ರಹಳ್ಳಿ ಮತ್ತು ಹೇರೋಹಳ್ಳಿ ಸುತ್ತಮುತ್ತಲ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ.
ಕಾವೇರಿ ಕುಡಿಯುವ ನೀರು ಸರಬರಾಜು 4ನೇ ಹಂತದ ಯೋಜನೆಯಡಿ ನೈಸ್ ರಸ್ತೆ ಜಂಕ್ಷನ್ ಸಮೀಪದ ಹೊಸ ಬೈರೋಹಳ್ಳಿ ಬಳಿ ನಿರ್ಮಾಣ ಆಗಲಿರುವ 25 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹ ಕೇಂದ್ರದಿಂದ ಯಲಹಂಕ ತನಕ 65 ಕಿಲೋ ಮೀಟರ್ ಉದ್ದದ ಪೈಪ್ ಅಳವಡಿಕೆ ಕಾಮಗಾರಿ ಈಗ ತುಂಗಾನಗರದಲ್ಲಿ ನಡೆಯುತ್ತಿದೆ.
ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಇರುವ ತುಂಗಾನಗರ ಈಗ ಕೆಮ್ಮಣ್ಣಿನಗುಂಡಿಯಾಗಿ ಮಾರ್ಪಟ್ಟಿದೆ. ಈ ಬಡಾವಣೆಯ ಮುಖ್ಯರಸ್ತೆಗೆ ಕಾಲಿಡಲು ಸಾಧ್ಯವಾಗದ ಸ್ಥಿತಿ ಇದೆ. ಮಾಗಡಿರಸ್ತೆ ಕಡೆಯಿಂದ ತುಂಗಾನಗರಕ್ಕೆ ಹೋಗಬೇಕೆಂದರೆ ರಸ್ತೆಯೇ ಇಲ್ಲವಾಗಿದೆ. ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಗೆದು ದೊಡ್ಡ ದೊಡ್ಡ ಕೊಳವೆಗಳನ್ನು ನೆಲದೊಳಗೆ ಜೋಡಿಸಲಾಗುತ್ತಿದೆ.
‘ರಸ್ತೆ ಬದಿಯಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ಪಾದಚಾರಿಗಳು ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಆದ್ದರಿಂದ ಹಲವರು ಹೋಟೆಲ್ ಮತ್ತು ಅಂಗಡಿಗಳನ್ನು ಮುಚ್ಚಿದ್ದಾರೆ. ಅಂಗಡಿ ತೆರೆದರೆ ದೂಳು ತುಂಬಿಕೊಳ್ಳುತ್ತದೆ. ದೂಳಿನ ನಡುವೆ ಖರೀದಿಗೆ ಜನ ಕೂಡ ಬರುವುದಿಲ್ಲ. ಆದ್ದರಿಂದ ಬಂದ್ ಮಾಡಿದ್ದೇವೆ’ ಎನ್ನುತ್ತಾರೆ ವ್ಯಾಪಾರಿಗಳು.
‘ಕಾಮಗಾರಿ ಆರಂಭವಾದ ದಿನದಿಂದ ನಮ್ಮ ನೆಮ್ಮದಿಯೇ ಹಾಳಾಗಿದೆ. ರಸ್ತೆ ಬದಿಯಲ್ಲಿ ಮಾತ್ರವಲ್ಲ ಇಡೀ ಬಡಾವಣೆಗೆ ದೂಳು ತುಂಬಿಕೊಂಡಿದೆ. ಮನೆಯ ಒಳಗೂ ದೂಳು ತುಂಬಿಕೊಳ್ಳುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
‘ಮುಖ್ಯರಸ್ತೆಯ ಸ್ಥಿತಿ ಇದಾದರೆ, ಅಡ್ಡರಸ್ತೆಗಳಲ್ಲಿ 110 ಹಳ್ಳಿ ಯೋಜನೆಯಡಿ ಒಳಚರಂಡಿ ಮತ್ತು ಕಾವೇರಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ರಸ್ತೆಗಳ ದುರಸ್ತಿ ಕಾಮಗಾರಿ ಮಾತ್ರ ನಡೆದಿಲ್ಲ. ತುಂಗಾನಗರದ ಯಾವ ರಸ್ತೆಗೆ ಹೋದರೂ ವಾಹನ ಸಂಚರಿಸಲು ಸಾಧ್ಯವಿಲ್ಲದಷ್ಟು ದುಸ್ತರವಾಗಿದೆ. ಸಮಸ್ಯೆಗೆ ಮುಕ್ತಿ ದೊರಕಲು ಇನ್ನೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ’ ಎಂದು ತುಂಗಾನಗರದಲ್ಲಿ ಬೇಕರಿ ನಡೆಸುವ ನವೀನ್‌ಗೌಡ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.