ADVERTISEMENT

ಯುವತಿ ಜೊತೆ ಮೊಮ್ಮಗ ಪರಾರಿ: ಅಜ್ಜಿಯ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
   

ಬೆಂಗಳೂರು: ಜಯನಗರ 26ನೇ ಅಡ್ಡರಸ್ತೆಯಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಚಂದ್ರಮ್ಮ (60) ಅವರ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮೈಕೊಲೇಔಟ್ ನಿವಾಸಿ ವಸಂತ್ ಹಾಗೂ ಕಾರ್ತಿಕ್ ಬಂಧಿತರು. ಜುಲೈ 1ರಂದು ಇವರಿಬ್ಬರು ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದು ಚಂದ್ರಮ್ಮ ತಲೆಗೆ ಹೊಡೆದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಚಂದ್ರಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ್ದ ಹೇಳಿಕೆ ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಂಗಿಯ ಕರೆದೊಯ್ದಿದ್ದಕ್ಕೆ ಕೋಪ: ‘ಆರೋಪಿ ವಸಂತ್‌ನ ತಂಗಿ ಹಾಗೂ ವೃದ್ಧೆ ಚಂದ್ರಮ್ಮ ಅವರ ಮೊಮ್ಮಗ ಲಕ್ಷ್ಮಣಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರು ಇತ್ತೀಚೆಗೆ ಮನೆ ತೊರೆದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೈಕೊ ಲೇಔಟ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಪ್ರೀತಿ ನಾಟಕವಾಡಿದ್ದ ಲಕ್ಷ್ಮಣಕುಮಾರ್, ತನ್ನ ತಂಗಿಯನ್ನು ಪುಸಲಾಯಿಸಿ ಕರೆದೊಯ್ದಿದ್ದಕ್ಕೆ ವಸಂತ್ ಕೋಪಗೊಂಡಿದ್ದ. ಅವರಿಬ್ಬರು ಎಲ್ಲಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಅಜ್ಜಿಯನ್ನು ವಿಚಾರಿಸಿದಾಗ, ತಮಗೆ ಗೊತ್ತಿಲ್ಲವೆಂದು ಹೇಳಿದ್ದರು.’

‘ಮೊಮ್ಮಗ ಇರುವ ವಿಳಾಸ ಗೊತ್ತಿದ್ದರೂ ಮೌನವಾಗಿದ್ದರು. ಚಂದ್ರಮ್ಮ, ಬೀದಿಬದಿ ತರಕಾರಿ–ಸೊಪ್ಪು ವ್ಯಾಪಾರ ಮುಂದುವರಿಸಿದ್ದರು. ವಿಳಾಸ ಪತ್ತೆಗೆ ಸಹಾಯ ಮಾಡಲಿಲ್ಲವೆಂದು ಸಿಟ್ಟಾಗಿದ್ದ ವಸಂತ್, ಸ್ನೇಹಿತ ಕಾರ್ತಿಕ್ ಜೊತೆ ಸೇರಿ ಅಜ್ಜಿಯ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಬೀದಿಬದಿ ವ್ಯಾಪಾರ ನಡೆಸುತ್ತಿದ್ದ ಕಾರಣಕ್ಕೆ ಚಂದ್ರಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ಸುದ್ದಿ ಹರಿದಾಡಿತ್ತು. ತನಿಖೆ ಕೈಗೊಂಡಾಗ, ಇದೊಂದು ಕೌಟುಂಬಿಕ ಜಗಳವೆಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.