ಬೆಂಗಳೂರು: ‘ಟಿಪ್ಪು ಜಯಂತಿ ರದ್ದುಗೊಳಿಸಿ 2019ರ ಜುಲೈ 30ರಂದು ಹೊರಡಿಸಿದ್ದ ಆದೇಶವನ್ನು ಮರು ಪರಿಶೀಲಿಸಲು ಇನ್ನಷ್ಟು ಸಮಯ ಬೇಕು’ ಎಂಬ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲ ವಿಕ್ರಮ್ ಹುಯಿಲಗೋಳ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ‘ಆದೇಶ ಮರುಪರಿಶೀಲನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಕುರಿತ ನಿರ್ಧಾರ ಕೈಗೊಳ್ಳಲು ಇನ್ನೂ ಎಂಟು ವಾರ ಕಾಲಾವಕಾಶ ಬೇಕು’ ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಮಧ್ಯಂತರ ಅರ್ಜಿ ಮಾನ್ಯ ಮಾಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ...ಈ ವರ್ಷ ಟಿಪ್ಪು ಪಠ್ಯಕ್ಕೆ ಕೊಕ್ ಇಲ್ಲ:ಸಚಿವ ಸುರೇಶ್ ಕುಮಾರ್
‘ಟಿಪ್ಪುವಿಗೆ ಸಂಬಂಧಿಸಿದಂತೆ 300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಅಧ್ಯಯನ ಮಾಡಿ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಅಂತೆಯೇ, ಗಣ್ಯರ ಜಯಂತಿ ಬಗ್ಗೆ ವಿವರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆ ಬಗೆಗಿನ ಎಲ್ಲ ಮಾಹಿತಿ ಸಂಗ್ರಹಿಸಲು ಕಾಲಾವಕಾಶದ ಅಗತ್ಯವಿದೆ’ ಎಂದು ಮಧ್ಯಂತರ ಅರ್ಜಿಯಲ್ಲಿ ತಿಳಿಸಲಾಗಿದೆ.
ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿರುವ ಬಿಜೆಪಿ ಸರ್ಕಾರದ ಕ್ರಮ ಪ್ರಶ್ನಿಸಿ ಉತ್ತರ ಪ್ರದೇಶದ ಲಖನೌನ ಬಿಲಾಲ್ ಆಲಿ ಷಾ, ‘ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್’ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ಮತ್ತು ‘ಟಿಪ್ಪು ರಾಷ್ಟ್ರೀಯ ಸೇವಾ ಸಂಘ’ದ ಅಧ್ಯಕ್ಷ ಎಂ.ಎಸ್.ಮುಕ್ರಮ್ ಈ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.