ADVERTISEMENT

ಬೆಂಗಳೂರು | ರಜೆ ನೀಡದಿದ್ದಕ್ಕೆ ಬೇಸರ: ಕಾರ್ಮಿಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 15:32 IST
Last Updated 15 ಡಿಸೆಂಬರ್ 2023, 15:32 IST
<div class="paragraphs"><p>ಆತ್ಮಹತ್ಯೆ</p></div>

ಆತ್ಮಹತ್ಯೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪೀಣ್ಯದಲ್ಲಿರುವ ಗಡಿಯಾರ ತಯಾರಿಕೆ ಕಂಪನಿಯೊಂದರ ಕಾರ್ಮಿಕ ಗೋವಿಂದರಾಜ್ (24) ಅವರು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

‘ಆಂಧ್ರಪ್ರದೇಶದ ಗುಡಿಬಂಡೆಯ ಗೋವಿಂದರಾಜ್, 6 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಾಯಿ, ಟಿ. ದಾಸರಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೊಠಡಿಯೊಂದರಲ್ಲಿ ತಾಯಿ ಜೊತೆ ಗೋವಿಂದರಾಜ್ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗುರುವಾರ ಸಂಜೆ ಕೆಲಸ ಮುಗಿಸಿ ಗೋವಿಂದರಾಜ್ ಕೊಠಡಿಗೆ ಬಂದಿದ್ದರು. ತಾಯಿ ಇರಲಿಲ್ಲ. ಅವರ ಸೀರೆ ತೆಗೆದುಕೊಂಡು ಅಪಾರ್ಟ್‌ಮೆಂಟ್‌ ಸಮುಚ್ಚಯ ಏರಿದ್ದ ಗೋವಿಂದರಾಜ್, ಮೆಟ್ಟಿಲುಗಳ ಬಳಿಯ ಕಂಬಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿವಾಸಿಗಳು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವ್ಯವಸ್ಥಾಪಕ, ಮೇಲ್ವಿಚಾರಕ ವಿರುದ್ಧ ಪ್ರಕರಣ: ‘ಕಂಪನಿಯ ವ್ಯವಸ್ಥಾಪಕ ಗುರುರಾಜಪ್ಪ ಹಾಗೂ ಮೇಲ್ವಿಚಾರಕ ನಂಜಪ್ಪ, ನನಗೆ ರಜೆ ನೀಡುತ್ತಿರಲಿಲ್ಲ. ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿದ್ದರು. ರಜೆ ಕೇಳಿದ್ದಕ್ಕೆ, ಕೆಲಸದಿಂದ ತೆಗೆಯುವುದಾಗಿ ಬೆದರಿಸಿದ್ದರು’ ಎಂದು ಗೋವಿಂದರಾಜ್ ಮರಣಪತ್ರ ಬರೆದಿಟ್ಟಿದ್ದಾರೆ. ಜೊತೆಗೆ, ವಿಡಿಯೊ ಸಹ ಮಾಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

‘ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಗುರುರಾಜಪ್ಪ ಹಾಗೂ ನಂಜಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಬುಧವಾರ (ಡಿ. 13) ರಜೆ ಪಡೆದಿದ್ದ ಗೋವಿಂದರಾಜ್, ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಿದ್ದರು. ರಜೆ ಪಡೆದಿದ್ದನ್ನು ಪ್ರಶ್ನಿಸಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇದೇ ವಿಚಾರವಾಗಿ ಗೋವಿಂದರಾಜ್ ಬೇಸರಗೊಂಡಿದ್ದರು ಎಂಬುದು ಸಹೋದ್ಯೋಗಿಗಳಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.