ADVERTISEMENT

ತಿರುಮೇನಹಳ್ಳಿ: ರಸ್ತೆ, ಚರಂಡಿ ವ್ಯವಸ್ಥೆ ಸರಿಪಡಿಸಲು ಆಗ್ರಹ

ಶಿವರಾಜು ಮೌರ್ಯ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ತಿರುಮೇನಹಳ್ಳಿಯಲ್ಲಿ ರಸ್ತೆಯ ದುಸ್ಥಿತಿ 
ತಿರುಮೇನಹಳ್ಳಿಯಲ್ಲಿ ರಸ್ತೆಯ ದುಸ್ಥಿತಿ    

ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಿರುಮೇನಹಳ್ಳಿಯ ಭೋವಿಕಾಲೋನಿಯಲ್ಲಿ ಸಮರ್ಪಕ ರಸ್ತೆ ಹಾಗೂ ಚರಂಡಿ ನಿರ್ಮಿಸದ ಕಾರಣ ರಸ್ತೆಯಲ್ಲಿ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ತಿರುಮೇನಹಳ್ಳಿಯ ಭೋವಿ ಕಾಲೊನಿಯಲ್ಲಿ ಐವತ್ತರಿಂದ ಅರವತ್ತು ಕುಟುಂಬದವರು ವಾಸಿಸುತ್ತಿದ್ದಾರೆ. ಈ ಕಾಲೊನಿಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಸುರಿದಾಗ, ನೀರಿನ ಜೊತೆಗೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಅಲ್ಲಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬಿರುತ್ತಿದೆ. ಇದರಿಂದ ಜನರ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ತಿರುಮೇನಹಳ್ಳಿ ಚಂದ್ರಶೇಖರ್ ದೂರಿದರು.

‘ಚರಂಡಿ ಮಾಡಿಕೊಡಿ ಎಂದು ಮಂಡೂರು ಪಂಚಾಯತಿ ಅಧಿಕಾರಿಗಳಿಗೆ ಏಳೆಂಟು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಹಿಂದೆ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವರು ಕಾಲೊನಿಗೆ ಭೇಟಿ ನೀಡಿದಾಗ ಅಧಿಕಾರಿಗಳಿಗೆ ಚರಂಡಿ ನಿರ್ಮಿಸುವಂತೆ ಸೂಚಿಸಿದ್ದರು. ಆದರೂ ಈವರೆಗೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಚರಂಡಿ, ರಸ್ತೆ ಮಾಡಿಸಿಕೊಡುವಂತೆ ರಾಷ್ಟ್ರಪತಿಯವರಿಗೂ ಇ–ಮೇಲ್ ಮೂಲಕ ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ‘ ಎಂದರು.

ADVERTISEMENT

ಚರಂಡಿ ನಿರ್ಮಿಸದೆ ಇರುವುದರಿಂದ ಕೊಳಚೆ ನೀರು ರಸ್ತೆ ಮೇಲೆ ನಿಂತು ದುರ್ವಾಸನೆ ಬಿರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಸೊಳ್ಳೆಗಳಿಂದಾಗಿ ಜನರು ಸಾಂಕ್ರಾಮಿಕ ರೋಗಗಳಾದ ಡೆಂಗಿ, ಮಲೇರಿಯಾ, ಚಿಕೂನ ಗುನ್ಯಾದಂತಹ ಕಾಯಿಲೆಗಳು ಹರಡುವ ಸಾಧ್ಯತೆ ಇದೆ ಎಂದು ಗ್ರಾಮದ ರವಿ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲವಾದ್ದರಿಂದ ಮನೆಯಲ್ಲಿ ಪಾತ್ರೆ ತೊಳೆದ ನೀರನ್ನು, ಮನೆಗಳ ಎದುರು ಗುಂಡಿಗಳನ್ನು ಮಾಡಿಕೊಂಡು ಬಿಡುತ್ತಿದ್ದೇವೆ. ಪಾತ್ರೆ ತೊಳೆದ ನೀರು ತುಂಬಿದ ನಂತರ ಊರ ಹೊರಗಡೆ ಹಾಕುವ ಸ್ಥಿತಿ ಇದೆ. ಇಲ್ಲಿನ ಸ್ಥಿತಿ ಹೇಳತೀರದಾಗಿದೆ’ ಎಂದು ಗ್ರಾಮದ ನಿವಾಸಿ ವಿನೋದಮ್ಮ ಹೇಳಿದರು.

ಈಗ ಮಳೆಗಾಲ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮಳೆ ನೀರಿನ ಹರಿಯುವ ಪ್ರಮಾಣ ಹೆಚ್ಚಾಗುತ್ತದೆ. ಅದರೊಂದಿಗೆ ಕೊಳಚೆ ನೀರು ಸೇರಿಕೊಳ್ಳುತ್ತದೆ. ಬಿಬಿಎಂಪಿ ಈ ಬಗ್ಗೆ ತಕ್ಷಣ ಗಮನಹರಿಸಿ, ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.