ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಹಕ್ಕುಪತ್ರ ನೀಡುವುದಕ್ಕೆ ಸಚಿವರ ಸಂಪುಟದ ತೀರ್ಮಾನವೊಂದು ಅಡ್ಡಿಯಾಗಿದೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಈ ಕುರಿತ ಪ್ರಶ್ನೆಗೆ ಆಯುಕ್ತರು ಉತ್ತರಿಸಿದರು.
‘ಕೊಳೆಗೇರಿ ನಿವಾಸಿಗಳಿಗೆ ಜಾಗದ ಹಕ್ಕುಪತ್ರ ನೀಡುವುದನ್ನು ನಿಲ್ಲಿಸಬೇಕು. ಅದರ ಬದಲು, ಬಹುಮಹಡಿ ಕಟ್ಟಡ ನಿರ್ಮಿಸಿ ಮನೆ ಹಂಚಿಕೆ ಮಾಡಬೇಕು ಎಂದು 2011ರಲ್ಲಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು. ಇದು ರದ್ದಾಗದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾರಿ ಜಾಗದಲ್ಲಿ ನೆಲೆಸಿರುವವರಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಹಕ್ಕುಪತ್ರ ನೀಡುವ ಬಗ್ಗೆ ಪಾಲಿಕೆ ಸಲ್ಲಿಸಿದ್ದ ಪ್ರಸ್ತಾಪಗಳೂ ತಿರಸ್ಕೃತಗೊಂಡಿವೆ. ಈ ಸಮಸ್ಯೆಗೆ ಇತ್ಯರ್ಥಪಡಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
‘ಕೊಳೆಗೇರಿಗಳಲ್ಲಿ ವಾಸವಾಗಿರುವವರಿಗೆ ಜಾಗದ ಹಕ್ಕುಪತ್ರದ ನೀಡಬೇಕು. ಈ ಉದ್ದೇಶಕ್ಕಾಗಿ ಕಂದಾಯ ಇಲಾಖೆ ಜಾಗವನ್ನೂ ಯಾವುದೇ ಶುಲ್ಕ ಪಡೆಯದೆಯೇ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕು. ಬಿಬಿಎಂಪಿ ವತಿಯಿಂದಲೇ ಹಕ್ಕುಪತ್ರ ನೀಡಬೇಕು ಎಂದು ಸರ್ಕಾರ 2010ರ ಜನವರಿ 13ರಂದು ಆದೇಶ ಮಾಡಿತ್ತು. ಅದರೆ, ಆ ಆದೇಶವನ್ನು 2011ರಲ್ಲಿ ರದ್ದುಪಡಿಸಲಾಯಿತು’ ಎಂದು ಅವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಅಕ್ರಮ ಕಟ್ಟಡಗಳ ಸಕ್ರಮೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ವ್ಯಾಜ್ಯ ಅಡ್ಡಿಯಾಗದು. ಸರ್ಕಾ ತೀರ್ಮಾನಿಸಿದಲ್ಲಿ, ಅಕ್ರಮ ಸಕ್ರಮ ಪ್ರಕರಣಗಳನ್ನು ಹೊರಗಿಟ್ಟು ಹಕ್ಕುಪತ್ರ ನೀಡಲು ಸಾಧ್ಯವಿದೆ ಎಂದರು.
ಶಾಸಕ ಕೆ.ಗೋಪಾಲಯ್ಯ, ‘ನಗರದ ಕೊಳೆಗೇರಿಗಳಲ್ಲಿ ನೆಲೆಸಿದ್ದ ಅನೇಕ ಕುಟುಂಬಗಳಿಗೆ ಸರ್ಕಾರ ಹಕ್ಕುಪತ್ರ ವಿತರಿಸಿದೆ. ಅದನ್ನು ಕೆಲವರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಖಾತಾ ನೋಂದಣಿ ಮಾಡಿಲ್ಲ. ಆ ಜಾಗದಲ್ಲಿ ನೆಲೆಸಿರುವವರು ಕಟ್ಟಡ ನಿರ್ಮಿಸಿದ್ದಾರೆ. ಆದರೆ, ಅವರಿಗೆ ಎ–ಖಾತಾ ಸಿಗುತ್ತಿಲ್ಲ’ ಎಂದು ಗಮನ ಸೆಳೆದರು.
‘ಹಿಂದಿನವರಿಗೆ ನೀಡಿದ್ದ ಹಕ್ಕುಪತ್ರ ರದ್ದುಪಡಿಸಲು ಅವಕಾಶ ಇದೆ. ಜಾಗದಲ್ಲಿ ನೆಲೆಸಿರುವವರಿಂದ ಪ್ರತಿ ಚದರ ಮೀಟರ್ ಜಾಗಕ್ಕೆ ₹ 200ರಂತೆ ದಂಡನಾ ಶುಲ್ಕ ಕಟ್ಟಿಸಿಕೊಂಡು ಹಕ್ಕುಪತ್ರ ನೀಡಬಹುದು ಎಂದು ಸರ್ಕಾರ ಸಿದ್ದಾಪುರದ ಕೊಳೆಗೇರಿಯ ಪ್ರಕರಣವೊಂದರಲ್ಲಿ ಆದೇಶ ಮಾಡಿದೆ. ಪ್ರತಿಯೊಂದು ವಾರ್ಡ್‌ನಲ್ಲೂ ಇಂತಹ ಸಮಸ್ಯೆ ಇದೆ. ಹಾಗಾಗಿ ಬಿಬಿಎಂಪಿಯು ಸರ್ಕಾರದ ಈ ಆದೇಶವನ್ನೇ ಆಧಾರವಾಗಿಟ್ಟುಕೊಂಡು ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ಕೊಳೆಗೇರಿಗಳಿಗೆ ಬಿಬಿಎಂಪಿ ಮೂಲಸೌಕರ್ಯ ಒದಗಿಸಿದೆ. ಇಲ್ಲಿನ ಕಟ್ಟಡಗಳಿಗೆ ಎ– ಖಾತಾ ನೀಡಿದರೆ ಪಾಲಿಕೆಗೂ ವರಮಾನ ಬರುತ್ತದೆ’ ಎಂದು ಆಡಳಿತ ಪಕ್ಷದ ನಾಯಕ ಶಿವರಾಜ್ ಸಲಹೆ ನೀಡಿದರು.
‘ಬಿಬಿಎಂಪಿ ವ್ಯಾಪ್ತಿಗೆ ಹೊಸತಾಗಿ ಸೇರ್ಪಡೆಯಾದ ಗ್ರಾಮಗಳಲ್ಲಿ ಜನ ಭೂಪರಿವರ್ತನೆ ಮಾಡಿಸದೆಯೇ ಕಟ್ಟಡ ಕಟ್ಟಿಸಿದ್ದಾರೆ. ಇನ್ನು ಕೆಲವರು ಬಡವಣೆ ನಕ್ಷೆಗಳಿಗೆ ಹಾಗೂ ಕಟ್ಟಡ ನಕ್ಷೆಗಳಿಗೆ ಮಂಜೂರಾತಿ ಪಡೆದಿಲ್ಲ. ಇನ್ನು ಕೆಲವರು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದಿಲ್ಲ. ನಗರದಲ್ಲಿ ಇಂತಹ ಸುಮಾರು 3 ಲಕ್ಷ ಕಟ್ಟಡಗಳಿವೆ. ಇವುಗಳಿಗೆ ಎ–ಖಾತಾ ನೀಡಲು ಬರುವುದಿಲ್ಲ. ಅಕ್ರಮ ಸಕ್ರಮ ಕುರಿತ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ 2008ರ ಬಳಿಕ ಎ ಖಾತಾ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
**
‘ಶೇ 50ರಷ್ಟು ಕಟ್ಟಡಗಳಿಂದ ತೆರಿಗೆ ಬರುತ್ತಿಲ್ಲ’
‘ವಾಣಿಜ್ಯ ಕಟ್ಟಡಗಳೂ ಸೇರಿ ನಗರದಲ್ಲಿ ಕೇವಲ 19 ಲಕ್ಷ ಕಟ್ಟಡಗಳಿಂದ ಮಾತ್ರ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಕೊಳೆಗೇರಿಗಳಲ್ಲಿರುವ ಶೇ 50ಕ್ಕೂ ಹೆಚ್ಚು ಕಟ್ಟಡಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಹುತೇಕರು ಬಡವರು. ಅವರು ತೆರಿಗೆ ಕಟ್ಟಲು ಸಿದ್ಧರಿದ್ದಾರೆ. ಅಂತಹವರಿಗೆ ಜಾಗದ ಹಕ್ಕುಪತ್ರ ನೀಡುವ ಬಗ್ಗೆ ಪಾಲಿಕೆ ನಿರ್ಣಯ ಕೈಗೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.
**
‘ರಾಜಕಾಲುವೆ ಹೂಳೆತ್ತದಿದ್ದರೆ ಮತ್ತೆ ಪ್ರವಾಹ’
ಬೆಂಗಳೂರು: ‘ನಗರದಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತದೆ. ರಾಜಕಾಲುವೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸದಿದ್ದರೆ ಈ ಸಲವೂ ಪ್ರವಾಹ ಎದುರಾಗುವ ಅಪಾಯವಿದೆ’ ಎಂದು ಪಾಲಿಕೆ ಸದಸ್ಯರು ಎಚ್ಚರಿಸಿದರು.
ಸಿಂಗಸಂದ್ರ ವಾರ್ಡ್‌ನಲ್ಲಿ ರಾಜಕಾಲುವೆ ಹೂಳೆತ್ತುವೆ ಕಾರ್ಯ ಅರ್ಧದಲ್ಲೇ ಸ್ಥಗಿತಗೊಂಡಿದೆ. ರಾಜಕಾಲುವೆಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು ಎಂದು ಬಿಜೆಪಿಯ ಶಾಂತಾ ಬಾಬು ಒತ್ತಾಯಿಸಿದರು.
‘ರಾಜಕಾಲುವೆಗಳ ಹೂಳೆತ್ತುವ ಟೆಂಡರ್ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಕಾಂಗ್ರೆಸ್‌ನ ಲತಾ ಕುವರ್ ರಾಥೋಡ್ ದೂರಿದರು.
‘ಬೇಗೂರು ಕೆರೆ ತುಂಬಿ ಅಕ್ಕಪಕ್ಕದ ಬಡಾವಣೆಗಳಿಗೆ ನೀರು ತುಂಬಿತ್ತು. ಇಲ್ಲಿನ ನಿವಾಸಿಗಳು ಈ ಬಾರಿ ಮಳೆಗಾಲದಲ್ಲೂ ಇಂತಹ ಪರಿಸ್ಥಿತಿ ಎದುರಾಗುವ ಆತಂಕ ಹೊಂದಿದ್ದಾರೆ’ ಎಂದು ಕಾಂಗ್ರೆಸ್‌ನ ಎಂ.ಆಂಜನಪ್ಪ ತಿಳಿಸಿದರು.
‘ಕಣಿವೆ ಪ್ರದೇಶಗಳಲ್ಲಿ ನಗರದಿಂದ ನೀರು ಹೊರಕ್ಕೆ ಹರಿದುಹೋಗುವ ಕಡೆ ಅಡ್ಡಿ ಇದ್ದುದರಿಂದ ಕಳೆದ ಎರಡು ವರ್ಷಗಳಲ್ಲಿ ಪ್ರವಾಹ ಉಂಟಾಗಿತ್ತು. ಈ ಬಾರಿ ನಗರದ ವ್ಯಾಪ್ತಿಯಿಂದ 3 ಕಿ.ಮೀ ಆಚೆಗೂ ರಾಜಕಾಲುವೆಗಳ ಪರಿಶೀಲನೆ ನಡೆಸಬೇಕು. ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್ ಸಂಪತ್‌ರಾಜ್ ತಿಳಿಸಿದರು.
‘ಪ್ರಜಾವಾಣಿ’ ವರದಿ ಪ್ರಸ್ತಾಪ: ಪ್ರವಾಹ ಉಂಟಾಗಿದ್ದ ಪ್ರದೇಶಗಳ ಸ್ಥಿತಿಗತಿ ಕಟ್ಟಿಕೊಡುವ ಉದ್ದೇಶದಿಂದ ’ಪ್ರಜಾವಾಣಿ’ ಪ್ರಕಟಿಸುತ್ತಿರುವ ‘ಪ್ರವಾಹ ಸಂಕಷ್ಟ ಪಾಲಿಕೆಗೆ ಪಾಠ’ ಸರಣಿ ಬಗ್ಗೆ ಅನೇಕ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.
**
ನಗರಕ್ಕೆ 135 ಕೋಟಿ ಲೀಟರ್‌ಗಳಷ್ಟು ಕಾವೇರಿ ನೀರು ನಿತ್ಯ ನಗರಕ್ಕೆ ಪೂರೈಕೆ ಆಗುತ್ತದೆ. ಇದರ ಜೊತೆ ಮಳೆ ನೀರು ಸೇರಿಕೊಂಡಾಗ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚು. ನೀರಿನ ನಿರ್ವಹಣೆ ಕುರಿತು ವೈಜ್ಞಾನಿಕ ಚಿಂತನೆ ಅಗತ್ಯ
– ಡಾ.ರಾಜು, ಬಿಜೆಪಿ ಸದಸ್ಯ
**
ಸಂಪತ್‌ರಾಜ್ ಅವರು ಮೇಯರ್ ಆಗಿ ಅಧಿಕಾರ ಸ್ವೀಕರಿಸಿದಾಗ ನಗರದಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಅವರು ನಿರ್ಗಮಿಸುವಾಗಲೂ ಪ್ರವಾಹ ಇರುವುದು ಬೇಡ ಎಂಬುದು ನಮ್ಮ ಹಾರೈಕೆ
– ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.