ADVERTISEMENT

ಕಾನ್‌ಸ್ಟೆಬಲ್‌ ಸುಳಿವು ಪತ್ತೆಗೆ 250 ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 19:28 IST
Last Updated 2 ಜುಲೈ 2024, 19:28 IST
   

ಬೆಂಗಳೂರು: ನಾಪತ್ತೆಯಾಗಿ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಡಿವಾಳ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಶಿವರಾಜ್‌ ಅವರ ಸುಳಿವಿಗಾಗಿ ಪೊಲೀಸರು, ನಗರದ 250 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು ಎಂದು ಗೊತ್ತಾಗಿದೆ.

ಶಿವರಾಜ್‌ ಅವರ ಮೃತದೇಹ ಸೋಮವಾರ ಜ್ಞಾನಭಾರತಿ ಆವರಣ ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು. ಜೂನ್‌ 25ರಂದು ಅವರು ನಾಪತ್ತೆ ಆಗಿದ್ದರು.

ನಾಪತ್ತೆ ಪ್ರಕರಣದ ದೂರು ದಾಖಲು ಮಾಡಿಕೊಂಡಿದ್ದ ಸುಬ್ರಮಣ್ಯಪುರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಮಡಿವಾಳ ಠಾಣೆ ಪೊಲೀಸರೂ ತಮ್ಮ ಠಾಣೆ ಸಿಬ್ಬಂದಿಗಾಗಿ ಶೋಧ ನಡೆಸಿದ್ದರು.

ADVERTISEMENT

‘ಶಿವರಾಜ್‌ ಅವರನ್ನು ಪತ್ತೆ ಮಾಡಲು ಹಲವು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿತ್ತು. ಆದರೂ ಸುಳಿವು ಸಿಕ್ಕಿರಲಿಲ್ಲ. ಕೊನೆಯಲ್ಲಿ ಶಿವರಾಜ್ ಅವರು ಜ್ಞಾನಭಾರತಿ ಮೆಟ್ರೊ ನಿಲ್ದಾಣಕ್ಕೆ ಬಂದು ವಾಹನ ನಿಲುಗಡೆ ಸ್ಥಳದಲ್ಲಿ ಬೈಕ್‌ ನಿಲುಗಡೆ ಮಾಡಿದ್ದು ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು. ನಂತರ, ನೀರಿನ ಬಾಟಲಿ ಹಾಗೂ ಬ್ಯಾಗ್ ಹಿಡಿದು ಬೆಂಗಳೂರು ವಿ.ವಿ ಆವರಣದ ಒಳಗೆ ನಡೆದುಕೊಂಡು ತೆರಳಿದ್ದ ದೃಶ್ಯ ಇನ್ನೊಂದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅದನ್ನು ಆಧರಿಸಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆ ಆಯಿತು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಶಿವರಾಜ್‌ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಕೌಟುಂಬಿಕ ಕಲಹದ ವಿಚಾರವಾಗಿ ಶಿವರಾಜ್ ಸೇರಿ ಅವರ ಕುಟುಂಬಸ್ಥರ ವಿರುದ್ದ ದಾವಣಗೆರೆ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಮಹಿಳೆ ಕರೆ ಮಾಡಿ, ಶಿವರಾಜ್‌ಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.