ADVERTISEMENT

ಬೆಂಗಳೂರು: ಅಪಘಾತದ ಸೋಗಿನಲ್ಲಿ 2 ಟನ್‌ ಟೊಮೆಟೊ ಕದ್ದಿದ್ದ ದಂಪತಿ ಬಂಧನ

₹1.5 ಲಕ್ಷ ಮೌಲ್ಯದ ಟೊಮೊಟೊ ಮಾರಾಟ * 10 ದಿನ ಕಾದು ಕಳ್ಳರ ಸೆರೆ ಹಿಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 15:43 IST
Last Updated 22 ಜುಲೈ 2023, 15:43 IST
ಭಾಸ್ಕರ್, ಸಿಂಧುಜಾ
ಭಾಸ್ಕರ್, ಸಿಂಧುಜಾ   

ಬೆಂಗಳೂರು: ಅಪಘಾತದ ಸೋಗಿನಲ್ಲಿ ರೈತರ ವಾಹನ ಅಡ್ಡಗಟ್ಟಿ ಸುಮಾರು ₹ 1.5 ಲಕ್ಷ ಮೌಲ್ಯದ 2 ಟನ್‌ ಟೊಮೆಟೊ ಕದ್ದೊಯ್ದಿದ್ದ ಪ್ರಕರಣದಲ್ಲಿ ತಮಿಳುನಾಡಿನ ದಂಪತಿಯನ್ನು ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಭಾಸ್ಕರ್ ಹಾಗೂ ಎರಡನೇ ಪತ್ನಿ ಸಿಂಧುಜಾ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿಗಳಾದ ರಾಕೇಶ್, ಮಹೇಶ್ ಹಾಗೂ ತಮಿಳುನಾಡಿನ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ಎರಡು ಕಾರು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಭಾಸ್ಕರ್, ಅಪರಾಧ ಹಿನ್ನೆಲೆಯುಳ್ಳವ. ಈತನ ವಿರುದ್ಧ ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. ತಲೆಮರೆಸಿಕೊಂಡಿರುವ ಆರೋಪಿ ರಾಕೇಶ್‌ನ ಪತ್ನಿ ಹಾಗೂ ಸಿಂಧುಜಾ ಸ್ನೇಹಿತೆಯರು. ಆಗಾಗ ಎಲ್ಲರೂ ಕುಟುಂಬ ಸಮೇತ ಒಂದೆಡೆ ಭೇಟಿಯಾಗುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

ವಾಹನ ಕಂಡು ಸಂಚು: ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರದ ರೈತರಾದ ಶಿವಣ್ಣ ಹಾಗೂ ಮಲ್ಲೇಶ್‌, ತಮ್ಮೂರಿನಿಂದ ಬೆಂಗಳೂರು ಮಾರ್ಗವಾಗಿ ಕೋಲಾರ ಮಾರುಕಟ್ಟೆಗೆ ವಾಹನದಲ್ಲಿ ಟೊಮೆಟೊ ಕೊಂಡೊಯ್ಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ನಗರದಲ್ಲಿರುವ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದ ಭಾಸ್ಕರ್ ಹಾಗೂ ಸಿಂಧುಜಾ, ತುಮಕೂರು ರಸ್ತೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಟೊಮೆಟೊ ವಾಹನ ನೋಡಿದ್ದ ಸಿಂಧುಜಾ, ಕಳ್ಳತನ ಮಾಡಿ ತಮ್ಮೂರಿಗೆ ಕೊಂಡೊಯ್ದು ಮಾರಲು ಸಂಚು ರೂಪಿಸಿದ್ದರು.’

‘ವಾಹನವನ್ನು ಅಡ್ಡಗಟ್ಟಿದ್ದ ಆರೋಪಿಗಳು, ‘ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದಿರಾ’ ಎಂದು ರೈತರನ್ನು ಥಳಿಸಿದ್ದರು. ನಂತರ, ಟೊಮೆಟೊ ವಾಹನ ಸಮೇತ ಪರಾರಿಯಾಗಿದ್ದರು. ಕೃತ್ಯದ ಬಗ್ಗೆ ರೈತರು ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

10 ದಿನ ಕಾದು ಬಂಧನ: ‘ಟೊಮೆಟೊ ವಾಹನ ಕದ್ದೊಯ್ದಿದ್ದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ತಮಿಳುನಾಡಿಗೆ ಹೋಗಿದ್ದ ವಿಶೇಷ ತಂಡ, 10 ದಿನ ಕಾದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

‘ವಾಹನವನ್ನು ತಮಿಳುನಾಡಿಗೆ ಕೊಂಡೊಯ್ದಿದ್ದ ಆರೋಪಿಗಳು, ವಾಣಿಯಂಬಾಡಿ ನಗರದಲ್ಲಿ  ಮಾರಿದ್ದರು. ಅದರಿಂದ ಬಂದ ಹಣವನ್ನು ಎಲ್ಲ ಆರೋಪಿಗಳು ಹಂಚಿಕೊಂಡಿದ್ದರು. ಬಳಿಕ, ವಾಹನವನ್ನು ಬೆಂಗಳೂರಿಗೆ ತಂದು ತುಮಕೂರು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದರು. ಕೃತ್ಯದ ಸಂದರ್ಭದಲ್ಲಿ ಆರೋಪಿಗಳು, ನೋಂದಣಿ ಸಂಖ್ಯೆ ಫಲಕವಿಲ್ಲದ ವಾಹನ ಬಳಸಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.