ADVERTISEMENT

ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳ: ಪುದುಚೇರಿ ಸಚಿವ

ಪ್ರವಾಸಿಗರ ಸೆಳೆಯಲು ರೋಡ್‌ ಶೋ: ಪುದುಚೇರಿ ಸಚಿವ ನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:54 IST
Last Updated 26 ಜುಲೈ 2024, 15:54 IST
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ  ಮಹಿಳೆಯರಿಗೆ ಮಾಹಿತಿ ನೀಡಲಾಯಿತು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ  ಮಹಿಳೆಯರಿಗೆ ಮಾಹಿತಿ ನೀಡಲಾಯಿತು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಕೋವಿಡ್ ಬಳಿಕ ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಂಡಿದ್ದು, ಪ್ರತಿ ವರ್ಷ ಸರಾಸರಿ 19 ಲಕ್ಷ ಪ್ರವಾಸಿಗರು ಪುದುಚೇರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಪುದುಚೇರಿಯ ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಲಕ್ಷ್ಮೀನಾರಾಯಣ ಹೇಳಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ 25ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಈ ಮೇಳ ಮೂರು ದಿನಗಳ ಕಾಲ ನಡೆಯಲಿದೆ.

ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಸಿ ಪ್ರವಾಸಿಗರ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಅನುದಾನ ದೊರೆತರೆ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

ಪುದುಚೇರಿಗೆ ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರ್ಕಾರ ದೇಶದ ಪ್ರಮುಖ ನಗರಗಳಲ್ಲಿ ರೋಡ್‌ ಶೋ ನಡೆಸುತ್ತಿದೆ. ಎಲ್ಲಾ ಬಗೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಕರ್ನಾಟಕದಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪುದುಚೇರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಪ್ರವಾಸಿ ಸ್ಥಳಗಳ ಮಾಹಿತಿ: ಸ್ಪಿಯರ್ ಟ್ರಾವೆಲ್‌ ಮೀಡಿಯಾ ಮತ್ತು ಎಕ್ಸಿಬಿಷನ್ಸ್ ಆಯೋಜಿಸಿರುವ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಖಾಸಗಿ ಪ್ರವಾಸಿ ಸಂಸ್ಥೆಗಳು ಮತ್ತು ಆತಿಥ್ಯ ಕ್ಷೇತ್ರದ ಸಂಸ್ಥೆಗಳು ಪಾಲ್ಗೊಂಡಿವೆ. 

25 ರಾಜ್ಯಗಳು ಮತ್ತು 15 ವಿವಿಧ ರಾಷ್ಟ್ರಗಳ 600ಕ್ಕೂ ಹೆಚ್ಚು ಪ್ರದರ್ಶಕರು ಮೇಳದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ದೆಹಲಿ, ತಮಿಳುನಾಡು, ಕೇರಳ ಸೇರಿದಂತೆ 25 ರಾಜ್ಯಗಳ ಪ್ರವಾಸೋದ್ಯಮ ಪಾಲುದಾದರು ಹಾಗೂ ಶ್ರೀಲಂಕಾ, ಮಲೇಷ್ಯಾ, ಇಸ್ರೇಲ್ , ಇಂಗ್ಲೆಂಡ್, ನೇಪಾಳ, ದುಬೈ, ಟರ್ಕಿ, ಸಿಂಗಪುರ, ಭೂತಾನ್, ಇಂಡೊನೇಷ್ಯಾ ಮುಂತಾದ 15ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮೇಳದಲ್ಲಿ ಪ್ರವಾಸಿಗಳ ಸ್ಥಳಗಳ ಬಗ್ಗೆ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಸ್ಪಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ರೋಹಿತ್ ಹಂಗಲ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ, ಸ್ಪಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ಸಂಜಯ್ ಹಖು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.