ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ನೀಡುವ ಪ್ರಕ್ರಿಯೆ ‘ಸಕಾಲ’ ಅವಧಿ ಮೀರಿದ್ದರೂ ಪೂರ್ಣಗೊಂಡಿಲ್ಲ. ಎಂಟು ವಲಯಗಳ ಆರೋಗ್ಯಾಧಿಕಾರಿಗಳ ವಿಭಾಗದಲ್ಲಿ 455 ಅರ್ಜಿಗಳು ವಿಲೇವಾರಿಯಾಗಿಲ್ಲ.
ರಾಜರಾಜೇಶ್ವರನಗರದಲ್ಲಿ ಅತಿಹೆಚ್ಚು ಟ್ರೇಡ್ ಲೈಸೆನ್ಸ್ ಅರ್ಜಿಗಳು ಬಾಕಿ ಉಳಿದಿವೆ. ಪೂರ್ವ ವಲಯದಲ್ಲೂ ಹೆಚ್ಚು ಅರ್ಜಿಗಳು ಸಕಾಲದಲ್ಲಿ ಬಾಕಿ ಉಳಿದಿದ್ದರೂ ಆರೋಗ್ಯ ಅಧಿಕಾರಿಗಳು ‘ಸಾಫ್ಟ್‌ವೇರ್ ಸರಿಯಿಲ್ಲ, ಪೋರ್ಟಲ್ ಸರಿಯಿಲ್ಲ. ಡೀಮ್ಡ್ ಟು ಅಪ್ರೂವ್ಡ್ ಕೂಡ ಬಾಕಿಯಲ್ಲಿ ತೋರಿಸುತ್ತಿದೆ’ ಎಂದು ಸಬೂಬು ಹೇಳುತ್ತಿದ್ದಾರೆ.
‘ಬಿಬಿಎಂಪಿ ಪೋರ್ಟಲ್ ಹಾಗೂ ಸಾಫ್ಟ್‌ವೇರ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಬಾಕಿಗಳನ್ನು ಸಂಬಂಧಿಸಿದ ಅಧಿಕಾರಿಗೇ ವಿಲೇವಾರಿ ಮಾಡಬೇಕು’ ಎಂದು ಬಿಬಿಎಂಪಿ ಐಟಿ ವಿಭಾಗದ ನಾಗೇಶ್ ಹೇಳಿದರು.
‘ಸರ್ವರ್ ಸಮಸ್ಯೆಯಿಂದ ಒಂದೆರಡು ತಿಂಗಳಿಂದ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಕೆಲವು ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ’ ಎಂದು ರಾಜರಾಜೇಶ್ವರಿ ಆರೋಗ್ಯ ವೈದ್ಯಾಧಿಕಾರಿ (ಎಂಒಎಚ್) ಡಾ. ದೇವಿಕಾರಾಣಿ ತಿಳಿಸಿದರು.
‘ಯಲಹಂಕದಲ್ಲಿ ಕೆಲವು ಕಾರಣಗಳಿಂದ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಎಂಒಎಚ್ ಡಾ. ಸುರೇಶ್ ರುದ್ರಪ್ಪ ಹೇಳಿದರು.
‘ಶಾಂತಿನಗರದಲ್ಲಿ ಹಿಂದಿನ 5 ಅರ್ಜಿಗಳು ಬಾಕಿ ಇವೆ. ಇದನ್ನು ಆರ್‌ಒಗಳು ವಿಲೇವಾರಿ ಮಾಡಬೇಕು. ಸಿ.ವಿ. ರಾಮನ್ ನಗರದಲ್ಲಿ 54 ಅರ್ಜಿಗಳು ಬಾಕಿ ಇದ್ದು, ಇವುಗಳ ಸ್ಥಿತಿಯನ್ನು ಪರಿಶೀಲಿಸಬೇಕಿದೆ. ಯಾವುದರಿಂದ ತಡೆಯಾಗಿದೆ ಎಂಬುದನ್ನು ತಿಳಿದು, ಬಗೆಹರಿಸಲಾಗುವುದು’ ಎಂದು ಎಂಒಎಚ್ ಡಾ.ಶ್ರೀನಿವಾಸ್ ತಿಳಿಸಿದರು.
‘ಲೋಕಾಯುಕ್ತ ತನಿಖೆಯಾಗಲಿ’: ‘ಟ್ರೇಡ್ ಲೈಸೆನ್ಸ್ ಅರ್ಜಿಗಳು ಬಾಕಿ ಇರುವ ಪಟ್ಟಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಲೋಕಾಯುಕ್ತರು ಇತ್ತ ಗಮನಹರಿಸಿ, ಆರೋಗ್ಯಾಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗುತ್ತಿದೆ.
‘ಬಿಬಿಎಂಪಿಯ ಕಂದಾಯ ವಿಭಾಗದ ಕಚೇರಿಗಳ ಮೇಲೆ ಲೋಕಾಯುಕ್ತರೇ ಇತ್ತೀಚೆಗೆ ದಾಳಿ ಮಾಡಿ ಕಡತಗಳ ವಿಲೇವಾರಿ ಬಗ್ಗೆ ಪರಿಶೀಲಿಸಿದ್ದರು. ಅದೇ ರೀತಿ ಆರೋಗ್ಯ ವಿಭಾಗದಲ್ಲಿ ‘ಸಕಾಲ’ದ ಅರ್ಜಿಗಳೇ ವಿಲೇವಾರಿಯಾಗುತ್ತಿಲ್ಲ. ಇದನ್ನು ತನಿಖೆ ಮಾಡಬೇಕು’ ಎಂಬ ಮನವಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.