ಪೀಣ್ಯ ದಾಸರಹಳ್ಳಿ: ‘ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಾಗರಿಕರ ಸಹಕಾರ ಅಗತ್ಯ. ನಿಮ್ಮ ಕಷ್ಟಗಳ ಬಗ್ಗೆ ಅರಿವಿದೆ. ಕಾನೂನಿನ ಚೌಕಟ್ಟು ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಜಿ.ಯು. ಸೋಮೇಗೌಡ ಭರವಸೆ ನೀಡಿದರು.
ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಆಯೋಜಿಸಿದ್ದ ‘ಸಂಚಾರ ಸಂಪರ್ಕ ದಿನ’ ಸಾರ್ವಜನಿಕ ಸಭೆಯಲ್ಲಿ ದೂರುಗಳನ್ನು ಆಲಿಸಿ ಅವರು ಮಾತನಾಡಿದರು.
ಎಂಟನೇ ಮೈಲಿಯಲ್ಲಿ ಆಟೊ ನಿಲ್ದಾಣದ ಸಮಸ್ಯೆ, ಹೆಲ್ಮೆಟ್ ಧರಿಸದೆ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ವಾಹನದಲ್ಲಿ ಹೋಗುವಾಗ ಟ್ರಾಫಿಕ್ ಪೊಲೀಸಿನವರು ವಾಹನದ ಫೋಟೋ ತೆಗೆಯುತ್ತಾರೆ, ಹೆಸರಘಟ್ಟ ಮುಖ್ಯರಸ್ತೆಯ ಎರಡು ಕಡೆಗಳಲ್ಲಿ ಬೆಳಿಗ್ಗೆ ಮತ್ತು ರಾತ್ರಿ ವಾಹನಗಳಲ್ಲಿ ಕ್ಯಾಂಟೀನ್ ನಡೆಸುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ ಎಂದು ನಾಗರಿಕರು ದೂರಿದರು.
’ವಿಡಿಯಾ ಸ್ಕೂಲ್ ಬಸ್ ನಿಲ್ದಾಣ ಮತ್ತು ಡಿಫೆನ್ಸ್ ಕಾಲೊನಿ ಕಡೆಯ ರಸ್ತೆಯಲ್ಲಿ ವಿಭಜಕದ ಸಮಸ್ಯೆ, ಆಚಾರ್ಯ ಕಾಲೇಜಿನ ರಸ್ತೆಯಲ್ಲಿ ಪುಂಡರು ವ್ಹೀಲೆ ಮಾಡುವುದರಿಂದ ತೊಂದರೆ, 12 ಚಕ್ರದ ಹೆಚ್ಚು ಲೋಡ್ ತುಂಬಿದ ಲಾರಿಗಳಿಂದ ರಸ್ತೆ ಹಾಳಾಗುತ್ತಿದೆ, ಪರವಾನಗಿ ಇಲ್ಲದೆ ಲಗೇಜ್ ಆಟೊಗಳ ಸಂಚಾರ, ಮಲ್ಲಸಂದ್ರದ ಪೈಪ್ ಲೈನ್ ರಸ್ತೆಯ ಎರಡು ಕಡೆ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ದೂರು ನೀಡಿದರು.
‘ರಸ್ತೆ ವಿಭಜಕದ ಸಮಸ್ಯೆ ಪರಿಹರಿಸಲು ಸ್ಥಳ ಪರಿಶೀಲನೆ ಮಾಡುತ್ತೇವೆ. ನೀರಿನ ಟ್ಯಾಂಕರ್, ಆಟೊಗಳ ಪರವಾನಗಿ ಪರಿಶೀಲಿಸಲಾಗುತ್ತದೆ. ವ್ಹೀಲೆ ಮಾಡುವವರ ವಿರುದ್ಧ ಮತ್ತು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡುವವರ ವಿರುದ್ಧವೂ ಕ್ರಮ ಜರುಗಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತದೆ’ ಎಂದು ಸೋಮೇಗೌಡ ಹೇಳಿದರು.
ಸಭೆಯಲ್ಲಿ ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಂ.ಬಿ. ರಾಘವೇಂದ್ರ ಬಾಬು, ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ. ಕುಮಾರ್ ಇದ್ದರು.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಅಧ್ಯಕ್ಷ ಬಿ.ಎಂ. ಚಿಕ್ಕಣ್ಣ, ಶೆಟ್ಟಿಹಳ್ಳಿ ವಾರ್ಡ್ ಸಹಾಯಕ ಎಂಜಿನಿಯರ್ ಮಂಜೇಗೌಡ, ಟ್ರಾಫಿಕ್ ಪೊಲೀಸ್, ಬಿಬಿಎಂಪಿ ಮತ್ತು ಚಿಕ್ಕಬಾಣಾವರ ಪುರಸಭೆ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.