ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಇ–ಕಾಮರ್ಸ್ ವಿತರಕರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರ ಸಂಚಾರ ಪೊಲೀಸರು, ಮಂಗಳವಾರ ಒಂದೇ ದಿನ 4,276 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಒಟ್ಟು ₹22 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಎರಡು ದಿನಗಳ ಹಿಂದೆಯೂ 2,670 ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಹೆಲ್ಮೆಟ್ ರಹಿತ ಚಾಲನೆ ಮಾಡಿದ್ದವರ ವಿರುದ್ಧ 1,552 ಪ್ರಕರಣ ದಾಖಲಿಸಿಕೊಂಡು, ₹7.47 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಚಾಲನೆಯ ಸಮಯದಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ 58 ಮಂದಿಯಿಂದ ₹68 ಸಾವಿರ ದಂಡ ಸಂಗ್ರಹಿಸಲಾಗಿದೆ.
ಸಿಗ್ನಲ್ ದಾಟುವಿಕೆ, ಪ್ರವೇಶ ನಿರ್ಬಂಧಿತ ರಸ್ತೆಗಳಲ್ಲಿ ತೆರಳಿ ಸಂಚಾರ ನಿಯಮ ಉಲ್ಲಂಘಿಸಿದ್ದ 754 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ₹3.60 ಲಕ್ಷ ದಂಡ ಸಂಗ್ರಹಿಸಲಾಗಿದೆ. ದೋಷಪೂರಿತ ನೋಂದಣಿ ಸಂಖ್ಯೆ ಫಲಕ, ಏಕಮುಖ ಸಂಚಾರ ಚಾಲನೆ, ಹಿಂಬದಿ ಸವಾರನ ಹೆಲ್ಮೆಟ್ ರಹಿತ ಚಾಲನೆ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.