ADVERTISEMENT

ಮೃತ ಹೆಡ್‌ ಕಾನ್‌ಸ್ಟೆಬಲ್ ಹೆಸರಿನಲ್ಲಿ ದಂಡ ವಸೂಲಿ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:31 IST
Last Updated 23 ಮೇ 2024, 15:31 IST
ಸುಭಿರ್
ಸುಭಿರ್   

ಬೆಂಗಳೂರು: ಮೃತ ಹೆಡ್‌ಕಾನ್‌ಸ್ಟೆಬಲ್‌ವೊಬ್ಬರ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಂಡು ಜನರಿಂದ ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೋಲ್ಕತ್ತಾದ ರಂಜನ್ ಕುಮಾರ್ ಪೋರ್ಬಿ (30), ಇಸ್ಮಾಯಿಲ್ ಅಲಿ (30) ಮತ್ತು ಸುಭಿರ್ ಮಲ್ಲಿಕ್ (27) ಬಂಧಿತರು. ಇವರಿಂದ ಮೂರು ಮೊಬೈಲ್ ಜಪ್ತಿ ಮಾಡಲಾಗಿದೆ. ವಂಚನೆಗೆ ಬಳಸಿದ್ದ ಬ್ಯಾಂಕ್ ಖಾತೆಗಳ ಮಾಹಿತಿ ಕಲೆಹಾಕಿ, ವಹಿವಾಟು ಸ್ಥಗಿತಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್‌ಕಾನ್‌ಸ್ಟೆಬಲ್‌ವೊಬ್ಬರು ಕಳೆದ ವರ್ಷ ಮೃತಪಟ್ಟಿದ್ದರು. ಜಾಲತಾಣವೊಂದರಲ್ಲಿ ಅಪ್‌ಲೋಡ್ ಮಾಡಿದ್ದ ಹೆಡ್‌ ಕಾನ್‌ಸ್ಟೆಬಲ್‌ ಅವರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡಿದ್ದ ಆರೋಪಿಗಳು, ಭಾವಚಿತ್ರ ಮಾತ್ರ ಉಳಿಸಿಕೊಂಡು ಹೆಸರು ಬದಲಾಯಿಸಿದ್ದರು. ಅದೇ ಗುರುತಿನ ಚೀಟಿಗಳನ್ನು ಜನರಿಗೆ ಕಳುಹಿಸಿ, ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮೃತ ಹೆಡ್‌ಕಾನ್‌ಸ್ಟೆಬಲ್ ಅವರ ಮಗಳು, ಆರೋಪಿಗಳ ಕೃತ್ಯದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು, ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ವಂಚಿಸಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಯಾರೊಬ್ಬರೂ ದೂರು ನೀಡಿಲ್ಲ. ವಂಚನೆಗೀಡಾದವರು ಯಾರಾದರೂ ಇದ್ದರೆ, ಠಾಣೆಗೆ ದೂರು ನೀಡಬಹುದು’ ಎಂದು ಕೋರಿದರು.

ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ, ವಂಚನೆಗೆ ಸಂಚು: ‘ಆರೋಪಿ ರಂಜನ್‌ಕುಮಾರ್, ಕೋಲ್ಕತ್ತಾದ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಇಸ್ಮಾಯಿಲ್ ಅಲಿ, ಸೈಬರ್ ಕೆಫೆ ತೆರೆದಿದ್ದ. ಮತ್ತೊಬ್ಬ ಆರೋಪಿ ಸುಭಿರ್ ಮಲ್ಲಿಕ್, ಜೆರಾಕ್ಸ್ ಮಳಿಗೆ ಇಟ್ಟುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದ ರಂಜನ್‌ಕುಮಾರ್, ‘ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರು ಹೆಚ್ಚಿದ್ದು, ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡೋಣ’ ಎಂಬುದಾಗಿ ಹೇಳಿ ಇತರೆ ಆರೋಪಿಗಳ ಜೊತೆ ಸೇರಿ ಸಂಚು ರೂಪಿಸಿದ್ದ’ ಎಂದು ತಿಳಿಸಿದರು.

ಜಾಲತಾಣಗಳಿಂದ ಮಾಹಿತಿ: ‘ಬೆಂಗಳೂರಿನ ಹಲವು ವಾಹನಗಳ ಫೋಟೊವನ್ನು ಆರೋಪಿಗಳು ಗೂಗಲ್ ಜಾಲತಾಣದ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು. ಅದೇ ವಾಹನಗಳ ನೋಂದಣಿ ಸಂಖ್ಯೆಯನ್ನು ಸಂಚಾರ ಪೊಲೀಸರ ಜಾಲತಾಣದಲ್ಲಿ ನಮೂದಿಸಿ, ದಂಡದ ಮಾಹಿತಿ ತಿಳಿದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ದಂಡ ಬಾಕಿ ಇರುತ್ತಿದ್ದ ವಾಹನಗಳ ನೋಂದಣಿ ಸಂಖ್ಯೆಯನ್ನು ಸಾರಿಗೆ ಇಲಾಖೆಯ ಜಾಲತಾಣದಲ್ಲಿ ನಮೂದಿಸುತ್ತಿದ್ದರು. ವಾಹನಗಳ ಮಾಲೀಕರ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಲಭ್ಯವಾಗುತ್ತಿತ್ತು’ ಎಂದು ತಿಳಿಸಿದರು.

ವಾಟ್ಸ್‌ಆ್ಯಪ್‌ಗೆ ದಂಡದ ನೋಟಿಸ್: ‘ದಂಡದ ನಕಲಿ ನೋಟಿಸ್ ಸಿದ್ಧಪಡಿಸುತ್ತಿದ್ದ ಆರೋಪಿಗಳು, ವಾಹನಗಳ ಮಾಲೀಕರ ವಾಟ್ಸ್‌ಆ್ಯಪ್‌ಗೆ ಕಳುಹಿಸುತ್ತಿದ್ದರು. ಇದರ ಜೊತೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್ ಅವರ ಗುರುತಿನ ಚೀಟಿ ಲಗತ್ತಿಸುತ್ತಿದ್ದರು. ಅದು ನಿಜವೆಂದು ನಂಬಿದ್ದ ಹಲವರು, ಆರೋಪಿಗಳು ಸೂಚಿಸುತ್ತಿದ್ದ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ರಂಜನ್‌ ಕುಮಾರ್

‘ಕೊಲ್ಕತ್ತಾದಿಂದಲೇ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಈ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಅವರು ನೀಡಿದ್ದ ಸುಳಿವು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಹಿನ್ನೆಲೆ ಏನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಇಸ್ಮಾಯಿಲ್ ಅಲಿ
‘₹500 ₹1000 ದಂಡ’
‘ಮೂವರು ಆರೋಪಿಗಳು ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ನಕಲಿ ನೋಟಿಸ್‌ಗೆ ಹೆದರಿ ₹500 ಹಾಗೂ ₹1000 ಪಾವತಿ ಮಾಡಿದ್ದ ಜನರ ಸಂಖ್ಯೆಯೇ ಹೆಚ್ಚಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ದಂಡ ಪಾವತಿ ನಂತರ ಆರೋಪಿಗಳು ಹಲವರಿಗೆ ರಶೀದಿ ನೀಡಿದ್ದಾರೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.