ಬೆಂಗಳೂರು: ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ 12 ಖಾಸಗಿ ಬಸ್ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 2,762 ಖಾಸಗಿ ಬಸ್‌ಗಳ ಚಾಲಕರನ್ನು ತಪಾಸಣೆ ನಡೆಸಿದರು.
‘ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗುವ ಖಾಸಗಿ ಬಸ್‌ಗಳ ಚಾಲಕರು ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಚಾಲಕರ ಈ ವರ್ತನೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ, ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಆಲ್ಕೊಮೀಟರ್ ಬಳಸಿ ಪ್ರತಿಯೊಬ್ಬ ಚಾಲಕರ ತಪಾಸಣೆ ನಡೆಸಲಾಯಿತು. ಈ ಪೈಕಿ 12 ಚಾಲಕರು ಮದ್ಯ ಕುಡಿದಿದ್ದು ಪತ್ತೆಯಾಯಿತು. ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಬಸ್ ಮಾಲೀಕರಿಗೂ ನೋಟಿಸ್ ನೀಡಲಾಗುವುದು’ ಎಂದು ತಿಳಿಸಿದರು.
31 ವಾಹನ ವಿರುದ್ಧ ಪ್ರಕರಣ: ‘14 ದ್ವಿಚಕ್ರ ವಾಹನ, 13 ಕ್ಯಾಬ್ ಹಾಗೂ 4 ಆಟೊಗಳ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ ಈ ಚಾಲಕರಿಗೆ ನೋಟಿಸ್ ನೀಡಲಾಗಿದ್ದು, ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.