ADVERTISEMENT

ಮುಗಿಯದ ಕಾಮಗಾರಿ ಕಿರಿಕಿರಿ: ಸಂಚಾರ ದಟ್ಟಣೆಯ ಬಿಸಿ

ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿಯಲ್ಲಿ ಹದಗೆಟ್ಟ ರಸ್ತೆಗಳೇ ಸವಾಲು

ಗುರು ಪಿ.ಎಸ್‌
Published 20 ನವೆಂಬರ್ 2019, 4:29 IST
Last Updated 20 ನವೆಂಬರ್ 2019, 4:29 IST
ಜಕ್ಕೂರು ಹೆಬ್ಬಾಳ ಸರ್ವಿಸ್‌ ರಸ್ತೆಯ ಬಳಿಯಿರುವ ರಾಜಕಾಲುವೆಯ ನೋಟ ಪ್ರಜಾವಾಣಿ ಚಿತ್ರಗಳು ಇರ್ಷಾದ್‌ ಮಹಮ್ಮದ್
ಜಕ್ಕೂರು ಹೆಬ್ಬಾಳ ಸರ್ವಿಸ್‌ ರಸ್ತೆಯ ಬಳಿಯಿರುವ ರಾಜಕಾಲುವೆಯ ನೋಟ ಪ್ರಜಾವಾಣಿ ಚಿತ್ರಗಳು ಇರ್ಷಾದ್‌ ಮಹಮ್ಮದ್   

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ಗಳ ಪೈಕಿ ಹೆಚ್ಚಿನವು 2008ರಿಂದೀಚೆಗೆ ಬಿಬಿಎಂಪಿ ವ್ಯಾಪ್ತಿಗೆ ಸೇರಿವೆ. ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ, ನೀರಿನ ಸಂಪರ್ಕ ಜಾಲ ಇರಲಿಲ್ಲ. ಈಗ ಒಳಚರಂಡಿ ವ್ಯವಸ್ಥೆ, ಕಾವೇರಿ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಆದರೆ, ವಿಳಂಬಗತಿಯ ಕಾಮಗಾರಿ ಇಲ್ಲಿನ ಜನರನ್ನು ಬಾಧಿಸುತ್ತಿದೆ. ದೂಳು, ಸಂಚಾರದಟ್ಟಣೆ, ಹದಗೆಟ್ಟ ರಸ್ತೆ ಇಲ್ಲಿನ ವಾರ್ಡ್‌ಗಳ ಎದ್ದುಕಾಣುವ ಸಾಮಾನ್ಯ ಸಮಸ್ಯೆಗಳು. ಇಲ್ಲಿನ ವಾರ್ಡ್‌ಗಳ ಸಮಸ್ಯೆ ಬಗ್ಗೆ ಗುರು ಪಿ.ಎಸ್‌. ಬೆಳಕು ಚೆಲ್ಲಿದ್ದಾರೆ.

ವಾರ್ಡ್‌ ಸಂಖ್ಯೆ 5– ಜಕ್ಕೂರು:ಈ ವಾರ್ಡ್‌ನ ಪ್ರಮುಖ ಸಮಸ್ಯೆಯೆಂದರೆ ಮೇಲ್ಸೇತುವೆ ಕಾಮಗಾರಿವಿಳಂಬವಾಗುತ್ತಿರುವುದು. ಜಕ್ಕೂರಿನಿಂದ ಯಲಹಂಕ ಸಂಪರ್ಕಿಸುವ ರಸ್ತೆಯಲ್ಲಿ ರೈಲು ಹಳಿಯ ಮೇಲೆ ಈ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಎಂಟು–ಒಂಬತ್ತು ವರ್ಷಗಳಿಂದ ನಡೆಯುತ್ತಿರುವ ಈ ಮೇಲ್ಸೇತುವೆ ಕಾಮಗಾರಿಗಾಗಿ ಹಲವು ಮನೆಗಳನ್ನೂ ನೆಲಸಮಗೊಳಿಸಲಾಗಿದೆ. ಆದರೆ, ಹೆಚ್ಚಿನ ಪರಿಹಾರ ಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಹಲವು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಕಾಮಗಾರಿಗಾಗಿ ಅಗೆದಿರುವ ರಸ್ತೆಗಳು ತೀರಾ ಹದಗೆಟ್ಟಿದ್ದು, ಮಳೆ ಬಂದರೆ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ.

ಉಳಿದಂತೆ, ಜಕ್ಕೂರು ಕೆರೆಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ವಾರ್ಡ್‌ ವ್ಯಾಪ್ತಿಯ ಹಳ್ಳಿಗಳ ನಡುವೆ ಸಂಪರ್ಕ ರಸ್ತೆಗಳನ್ನು ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.

ADVERTISEMENT

ವಾರ್ಡ್‌ ಸಂಖ್ಯೆ 6– ಥಣಿಸಂದ್ರ:ಬಡ, ಮಧ್ಯಮ ಹಾಗೂ ಶ್ರೀಮಂತ... ಹೀಗೆ ಎಲ್ಲ ವರ್ಗದ ಜನ ಈ ವಾರ್ಡ್‌ನಲ್ಲಿದ್ದಾರೆ. ಗ್ರಾಮ ಸಂಸ್ಕೃತಿಯಿಂದ ನಗರ ಸಂಸ್ಕೃತಿಯತ್ತ ನಿಧಾನವಾಗಿ ಈ ವಾರ್ಡ್‌ ಬದಲಾಗುತ್ತಿದೆ. ಆದರೆ, ಅದಕ್ಕೆ ತಕ್ಕ ಸೌಲಭ್ಯಗಳ ಕೊರತೆ ಇಲ್ಲಿ ಕಾಣುತ್ತದೆ.

ರಾಚೇನಹಳ್ಳಿ, ಥಣಿಸಂದ್ರ, ದಾಸರಹಳ್ಳಿ ಗ್ರಾಮಗಳೂ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಮೇಸ್ತ್ರಿಪಾಳ್ಯ ಮತ್ತು ನಾಗವಾರ ಹಾಗೂ ರಾಚೇನಹಳ್ಳಿಯಲ್ಲಿ ಕಾಂಕ್ರೀಟ್‌ ರಸ್ತೆ, ಒಳಚರಂಡಿ ಹಾಗೂ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ.

ಆರ್ಥಿಕವಾಗಿ ಹಿಂದುಳಿದ ಜನ ಇರುವ ಪ್ರದೇಶಗಳಲ್ಲಿ ಚಿಕ್ಕ ರಸ್ತೆಗಳಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಬಿಸಿಲಿದ್ದಾಗ ದೂಳು, ಮಳೆ ಬಂದಾಗ ಕೆಸರು ಇಲ್ಲಿ ಸಾಮಾನ್ಯ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹೆಗಡೆ ನಗರದಲ್ಲಿ ಅಭಿವೃದ್ಧಿ ಪಡಿಸಿರುವ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಮಕ್ಕಳ ಆಟಿಕೆಗಳು ಉದ್ಯಾನದ ಆಕರ್ಷಣೆಯನ್ನು ಹೆಚ್ಚಿಸಿದೆ.

ವಾರ್ಡ್‌ ಸಂಖ್ಯೆ 7–ಬ್ಯಾಟರಾಯನಪುರ:ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ, ಬ್ಯಾಟರಾಯನಪುರದಲ್ಲಿ ಮೂಲಸೌಲಭ್ಯಗಳ ಕೊರತೆ ಹೆಚ್ಚಾಗಿಯೇ ಇದೆ. ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಇಲ್ಲಿಯೂ ಪ್ರಗತಿಯಲ್ಲಿದ್ದು, ರಸ್ತೆಗಳು ಹದಗೆಟ್ಟಿವೆ. ಒಮ್ಮೆ ಬಿಬಿಎಂಪಿ, ಮತ್ತೊಮ್ಮೆ ಜಲಮಂಡಳಿ, ನಂತರ ಬೆಸ್ಕಾಂ ಸರದಿಯಂತೆ ರಸ್ತೆ ಅಗೆಯುತ್ತಿದ್ದಾರೆ. ಆದರೆ, ತಾತ್ಕಾಲಿಕವಾಗಿಯಾದರೂ ಅವುಗಳನ್ನು ದುರಸ್ತಿಗೊಳಿಸುವ ಕೆಲಸವಾಗಿಲ್ಲ.

ಅಮೃತಹಳ್ಳಿ ಕೆರೆಗೆ ಸೇರುವ ರಾಜಕಾಲುವೆಯಲ್ಲಿ ನಿತ್ಯ ಕಸ ಸುರಿಯಲಾಗುತ್ತಿದೆ. ಮಳೆ ಬಂದಾಗ, ಈ ರಾಜಕಾಲುವೆ ತುಂಬಿ ಹರಿದು, ಮನೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆಯಿಂದ ಮಣ್ಣನ್ನು ಹೊರತೆಗೆದವರು ಅದನ್ನು ದಂಡೆಯ ಮೇಲೆಯೇ ಸುರಿದು ಹೋಗಿದ್ದಾರೆ. ಮಳೆ ಬಂದಾಗ ಮತ್ತೆ ಈ ಮಣ್ಣು ರಾಜಕಾಲುವೆಯನ್ನು ಸೇರುತ್ತಿದೆ.

ಈ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಾಕಷ್ಟು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಆದರೆ, ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು. ಬ್ಯಾಟರಾಯನಪುರದ ಶಬರಿನಗರ ರಸ್ತೆಯಿಂದ ಬಳ್ಳಾರಿ ರಸ್ತೆಗೆ ಈಗ ನೇರ ಸಂಪರ್ಕ ಕಲ್ಪಿಸಲಾಗಿದೆ. ಈ ರಸ್ತೆ ಅಭಿವೃದ್ಧಿ ನಂತರ ವಾಹನಗಳ ಸಂಚಾರ ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಎಲ್‌ ಆ್ಯಂಡ್‌ ಟಿ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ವಾರ್ಡ್‌ನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಬ್ಯಾಟರಾಯನಪುರ ಸರ್ಕಾರಿ ಶಾಲೆಗಳಲ್ಲಿ ರಂಗಮಂದಿರ ನಿರ್ಮಾಣ ಮಾಡಿರುವುದಲ್ಲದೆ, ಅಮೃತಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ಮಾಡುತ್ತಿದೆ.

ವಾರ್ಡ್‌ ಸಂಖ್ಯೆ 8– ಕೊಡಿಗೇಹಳ್ಳಿ:ಹೆಚ್ಚಾಗಿ ಇನ್ನೂ ಗ್ರಾಮದ ಲಕ್ಷಣವನ್ನೇ ಹೊಂದಿರುವ ವಾರ್ಡ್‌ ಇದು. ಬೇಸಿಗೆಯಲ್ಲಿ ಹೊರತುಪಡಿಸಿದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿಲ್ಲ. ಆದರೆ, ಎಲ್ಲ ವಾರ್ಡ್‌ನಲ್ಲಿರುವಂತೆ ಇಲ್ಲಿಯೂ ಹದಗೆಟ್ಟ ರಸ್ತೆಗಳೇ ದೊಡ್ಡ ಸಮಸ್ಯೆ. ವಿಮಾನ ನಿಲ್ದಾಣ ರಸ್ತೆ ಮತ್ತು ಬ್ಯಾಟರಾಯನಪುರದ ನಡುವೆ ರೈಲು ಹಳಿ ಇದ್ದು, ರೈಲ್ವೆ ಗೇಟ್‌ ಹಾಕಿದಾಗ ದಟ್ಟಣೆ ಉಂಟಾಗಿ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಭದ್ರಪ್ಪ ಲೇಔಟ್‌ಗೆ ಶಾಂತಿನಿಕೇತನ ಕಡೆಯಿಂದ ಹೆಚ್ಚು ಮಕ್ಕಳು ಶಾಲೆಗೆ ಬರುತ್ತಾರೆ. ಆದರೆ, ಶಾಲೆಯ ಸಂದರ್ಭದಲ್ಲಿಯೇ ರೈಲ್ವೆ ಗೇಟ್‌ ಹಾಕಲಾಗಿರುತ್ತದೆ. ಈ ಸಂದರ್ಭದಲ್ಲಿ ಶಾಲೆಗೆ ತಡವಾಗುತ್ತದೆ. ಅಲ್ಲದೆ, ಕಚೇರಿ ಸಮಯದಲ್ಲಿ ಗೇಟ್ ಹಾಕಿದಾಗ ಉದ್ಯೋಗಿಗಳು ತೊಂದರೆ ಪಡಬೇಕಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ವಾರ್ಡ್‌ನ ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಆಗಾಗ ಮೋರಿಗಳು ಕಟ್ಟಿಕೊಂಡು ಕಲುಷಿತ ನೀರು ರಸ್ತೆಗಳ ಮೇಲೆ ಹರಿಯುತ್ತವೆ. ದುರ್ವಾಸನೆ ತಡೆಯಲಾಗುವುದಿಲ್ಲ. ಮಳೆ ಬಂದಾಗ ನೀರು ಕೂಡ ಹರಿದುಹೋಗುವ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರಾದ ನಾರಾಯಣರೆಡ್ಡಿ ದೂರುತ್ತಾರೆ.

ಪಾಲಿಕೆ ಸದಸ್ಯರು ಹೇಳುವುದೇನು?

ಮೂಲಸೌಲಭ್ಯ ಕಲ್ಪಿಸಲು ಆದ್ಯತೆ
24 ಚದರ ಕಿ.ಮೀ. ವಿಸ್ತಾರದಲ್ಲಿರುವ ಜಕ್ಕೂರು ಎರಡನೇ ಅತಿ ದೊಡ್ಡ ವಾರ್ಡ್‌. ಎಂಟು ಹಳ್ಳಿಗಳು ವಾರ್ಡ್‌ ವ್ಯಾಪ್ತಿಯಲ್ಲಿವೆ. ಪ್ರಮುಖವಾಗಿ ಕಾವೇರಿ ನೀರು ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ.ಈ ಕಾರಣದಿಂದ ರಸ್ತೆಗಳು ಹದಗೆಟ್ಟಿವೆ. ಇದರಿಂದ ಜನರಿಗೆ ಆಗುತ್ತಿರುವ ತೊಂದರೆಯ ಅರಿವು ಇದೆ. ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸಂಪರ್ಕ ರಸ್ತೆಗಳ ನಿರ್ಮಾಣ ನಡೆಯುತ್ತಿದೆ. ಇದೆಲ್ಲ ಶಾಶ್ವತವಾದ ಕೆಲಸ. ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡುತ್ತಿದ್ದೇನೆ.
–ಕೆ.ಎ. ಮುನೀಂದ್ರಕುಮಾರ್, ಜಕ್ಕೂರು ವಾರ್ಡ್‌

*
ಅನುದಾನ ಕಡಿತವಾಗಿರುವುದರಿಂದ ಸಮಸ್ಯೆ
ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ವಾರ್ಡ್‌ಗೆ ನೀಡಿದ್ದ ಅನುದಾನದಲ್ಲಿ ₹100 ಕೋಟಿ ಅನುದಾನವನ್ನು ಈ ಸರ್ಕಾರ ಕಡಿತಗೊಳಿಸಿದೆ. 432 ಕಿ.ಮೀ. ವಿಸ್ತಾರದಲ್ಲಿ ಹರಡಿಕೊಂಡಿರುವ ವಾರ್ಡ್‌ ನಮ್ಮದು. ಒಳಚರಂಡಿ ಮತ್ತು ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬಸ್‌ಗಳ ಸೌಲಭ್ಯ ಚೆನ್ನಾಗಿದೆ.
–ಕೆ.ಎಂ. ಮಮತಾ, ಥಣಿಸಂದ್ರ ವಾರ್ಡ್‌

*
ಎಲ್ಲ ರಸ್ತೆ ಡಾಂಬರೀಕರಣ ಶೀಘ್ರ
ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ವಾರ್ಡ್‌ಗೆ ಮಂಜೂರಾಗಿದ್ದ ಎಲ್ಲ ಹಣವನ್ನು ನೂತನ ಸರ್ಕಾರ ಬಂದ ನಂತರ ವಾಪಸ್‌ ತೆಗೆದುಕೊಳ್ಳಲಾಗಿರುವುದರಿಂದ ತೊಂದರೆಯಾಗಿದೆ. ಸದ್ಯ, ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಮುಗಿಯುತ್ತಿದ್ದಂತೆ ಮರಿಯಪ್ಪನಪಾಳ್ಯದ ಎಲ್ಲ ರಸ್ತೆಗಳ ಡಾಂಬರೀಕರಣ ಮಾಡಲಾಗುವುದು. ನಂತರ, ಹಂತ–ಹಂತವಾಗಿ ಉಳಿದ ರಸ್ತೆಗಳ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.

ಶಬರಿನಗರ ಸೇರಿದಂತೆ ಸಹಕಾರ ನಗರ ಮತ್ತಿತರ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಈ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರೆ, ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹಾಗಾಗಿ, ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
–ಪಿ.ವಿ. ಮಂಜುನಾಥ್‌ (ಬಾಬು), ಬ್ಯಾಟರಾಯನಪುರ

ಕೊಡಿಗೇಹಳ್ಳಿ ವಾರ್ಡ್‌ ಸದಸ್ಯ ಕೆ.ಎಂ. ಚೇತನ್‌ ಅವರನ್ನು ಹಲವು ಬಾರಿ ಸಂಪರ್ಕಿಸಿದರೂ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

**

ಮಳೆ ಬಂದರೆ ಮನೆಗೆ ನೀರು
ಶಬರಿನಗರ ರಸ್ತೆಯಲ್ಲಿನ ರಾಜಕಾಲುವೆಯಲ್ಲಿ ಕಸ ಸುರಿಯಲಾಗುತ್ತಿದೆ. ಕಟ್ಟಡ ತ್ಯಾಜ್ಯವನ್ನೂ ಇಲ್ಲಿಯೇ ಸುರಿಯಲಾಗುತ್ತಿದೆ. ಮಳೆ ಬಂದರೆ ಮನೆಗೇ ನೀರು ನುಗ್ಗುತ್ತದೆ. ಬಿಬಿಎಂಪಿಯವರಿಗೆ ಕೇಳಿದರೆ ಜಲಮಂಡಳಿಯವರಿಗೆ ಹೇಳುತ್ತಾರೆ. ಜಲಮಂಡಳಿಯವರಿಗೆ ಕೇಳಿದರೆ ಬಿಬಿಎಂಪಿಯವರ ಮೇಲೆ ಹಾಕುತ್ತಾರೆ. ಜನಪ್ರತಿನಿಧಿಗಳು ಇತ್ತ ತಲೆಯೇ ಹಾಕಿಲ್ಲ. ನಮ್ಮ ಏರಿಯಾ ಎಲ್ಲಿದೆ ಎಂದೂ ಅವರಿಗೆ ಗೊತ್ತಿಲ್ಲ ಎನಿಸುತ್ತದೆ.
–ಲಕ್ಷ್ಮಣ್‌, ಬ್ಯಾಟರಾಯನಪುರ ವಾರ್ಡ್‌

*

ಮಳೆ ಬಂದಾಗ ತೊಂದರೆ
ಜಕ್ಕೂರು ಕೆರೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಆದರೆ, ವಾರ್ಡ್‌ನಲ್ಲಿ ಪಾದಚಾರಿ ಮಾರ್ಗ, ರಸ್ತೆಗಳು ಚೆನ್ನಾಗಿಲ್ಲ. ಬೆಳಿಗ್ಗೆ ಮತ್ತು ಸಂಜೆ ವೇಳೆ ವಿಪರೀತ ಸಂಚಾರದಟ್ಟಣೆ ಉಂಟಾಗುತ್ತಿದೆ. ಬಹಳಷ್ಟು ರಸ್ತೆಗಳು ಇನ್ನೂ ಡಾಂಬರು ಮುಖವನ್ನೇ ನೋಡಿಲ್ಲ. ಮಳೆ ಬಂದಾಗಲಂತೂ ವಿಪರೀತ ಸಮಸ್ಯೆಯಾಗುತ್ತದೆ.
–ಸುಮಂತ್‌, ಜಕ್ಕೂರು ವಾರ್ಡ್‌

*
ರಸ್ತೆ ದುರಸ್ತಿಯಾಗಬೇಕು
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಈಗ ನೀರಿನ ಸಮಸ್ಯೆ ಏನೂ ಇಲ್ಲ. ಆದರೆ, ರಸ್ತೆಗಳೇ ಸರಿ ಇಲ್ಲ. ಒಳಚರಂಡಿ ಆಗಾಗ ಕಟ್ಟಿಕೊಳ್ಳುತ್ತವೆ. ಮಳೆ ಬಂದಾಗ ಸಮಸ್ಯೆಯಾಗುತ್ತದೆ. ಉದ್ಯಾನಗಳು ಹೆಚ್ಚಾಗಿ ಇಲ್ಲ. ಭದ್ರಪ್ಪ ಲೇಔಟ್‌ ಮುಖ್ಯರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ.
–ರಾಜು, ಕೊಡಿಗೆಹಳ್ಳಿ ವಾರ್ಡ್‌

*
ಬಸ್‌ ಸೌಲಭ್ಯವಿಲ್ಲ
ರಸ್ತೆಗಳು ಸರಿಯಿಲ್ಲ. ಇದರಿಂದ ಹೆಚ್ಚಿನ ಬಸ್‌ಗಳು ಕೂಡ ಬರುವುದಿಲ್ಲ. ಮೊದಲು ಶಿವಾಜಿನಗರ ಬಸ್‌ಗಳು ಬರುತ್ತಿದ್ದವು. ಈಗ ಅವುಗಳೂ ಬರುತ್ತಿಲ್ಲ. ಜಿಕೆವಿಕೆ, ಅಮೃತಹಳ್ಳಿ ಅಥವಾ ಯಾವುದಾದರೂ ಮುಖ್ಯರಸ್ತೆಗೆ ಹೋಗಿ ನಿಲ್ಲಬೇಕಾಗಿದೆ.
–ಶಿವಪ್ಪ, ಜಕ್ಕೂರು ವಾರ್ಡ್‌

***

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು

ಜಕ್ಕೂರು

* ಜಕ್ಕೂರು–ಯಲಹಂಕ ಮೇಲ್ಸೇತುವೆ ಕಾಮಗಾರಿ ವಿಳಂಬ

* ಬೆಳಿಗ್ಗೆ–ಸಂಜೆ ಸಂಚಾರ ದಟ್ಟಣೆ

* ಬಸ್‌ ಸೌಲಭ್ಯ ಕೊರತೆ

ಥಣಿಸಂದ್ರ
* ಮೂಲಸೌಲಭ್ಯ ಕೊರತೆ

* ದುರಸ್ತಿ ಕಾಣದ ಸಣ್ಣ ರಸ್ತೆಗಳು

* ಅಸಮರ್ಪಕ ತ್ಯಾಜ್ಯ ವಿಲೇವಾರಿ

ಬ್ಯಾಟರಾಯನಪುರ
* ಕಸ ತುಂಬಿದ ರಾಜಕಾಲುವೆಗಳು

* ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

* ದುರಸ್ತಿ ಕಾಣದ ರಸ್ತೆಗಳು

ಕೊಡಿಗೇಹಳ್ಳಿ
* ಹದಗೆಟ್ಟ ರಸ್ತೆಗಳು

* ಸಂಚಾರ ದಟ್ಟಣೆ

* ಉದ್ಯಾನಗಳ ಕೊರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.