ADVERTISEMENT

ಸಂಚಾರ ನಿಯಮ ಉಲ್ಲಂಘನೆ | 11,340 ಪ್ರಕರಣ: ₹69.46 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:13 IST
Last Updated 25 ನವೆಂಬರ್ 2024, 15:13 IST
<div class="paragraphs"><p>ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಪೊಲೀಸರು ದಂಡ ಪಾವತಿಸಿಕೊಳ್ಳುತ್ತಿರುವ ಚಿತ್ರಣ</p></div>

ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಪೊಲೀಸರು ದಂಡ ಪಾವತಿಸಿಕೊಳ್ಳುತ್ತಿರುವ ಚಿತ್ರಣ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ವಿಭಾಗದ ಪೊಲೀಸರು, ತಪ್ಪಿತಸ್ಥರ ವಿರುದ್ಧ 11,340 ಪ್ರಕರಣ ದಾಖಲಿಸಿಕೊಂಡು, ₹69.46 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ADVERTISEMENT

ಉತ್ತರ ವಿಭಾಗದ ಸಂಚಾರ ಪೊಲೀಸರು ಏಳು ದಿನ ನಡೆಸಿದ ಕಾರ್ಯಾಚರಣೆಯಲ್ಲಿ 9,912 ಪ್ರಕರಣ ದಾಖಲಿಸಿಕೊಂಡು, ₹66.46 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಅಪಘಾತ ತಡೆಗಟ್ಟುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ನವೆಬರ್‌ 17ರಿಂದ 23ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಪ್ರತಿನಿತ್ಯ ಬೆಳಿಗ್ಗೆ 11.30ರಿಂದ ಸಂಜೆ 4ರ ತನಕ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ತಪ್ಪಿತಸ್ಥ ಚಾಲಕರನ್ನು ಪತ್ತೆಹಚ್ಚಿ ದಂಡ ಹಾಕಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಅಡ್ಡಾದಿಡ್ಡಿ ಚಾಲನೆಯ 12, ಅತಿವೇಗದ ವಾಹನ ಸಂಚಾರ 154, ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವರ ವಿರುದ್ಧ 107, ಮದ್ಯ ಸೇವಿಸಿ ಚಾಲನೆ 223, ಸೈಲೆನ್ಸರ್ ಮಾರ್ಪಾಡು 8, ಕರ್ಕಶ ಹಾರ್ನ್‌ ಅಳವಡಿಕೆ 8, ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡುತ್ತಿದ್ದವರ ವಿರುದ್ಧ 134, ಟ್ರಾಫಿಕ್‌ ಸಿಗ್ನಲ್‌ ಅನ್ನು ದಾಟಿದ್ದವರ ವಿರುದ್ಧ 92, ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದ 337, ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಸಂಚಾರ 1,495, ಸಮವಸ್ತ್ರರಹಿತ ವಾಹನ ಚಾಲನೆ 107, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 117, ಬೈಕ್‌ನಲ್ಲಿ ಮೂವರು ಕುಳಿತು ಸವಾರಿ ಮಾಡುತ್ತಿದ್ದವರ ವಿರುದ್ಧ 154, ಸೀಟ್‌ ಬೆಲ್ಟ್‌ರಹಿತ ಚಾಲನೆ 301, ಹೆಲ್ಮೆಟ್‌ರಹಿತ ಚಾಲನೆ 1,194 ಸೇರಿದಂತೆ ಒಟ್ಟು 9,912 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪೂರ್ವ ವಿಭಾಗದಲ್ಲೂ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಟ್ಟು 626 ಪ್ರಕರಣ ದಾಖಲಿಸಿದ್ದಾರೆ. ಜತೆಗೆ ₹3.13 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಮದ್ಯ ಸೇವಿಸಿ, ಚಾಲನೆ:

ಸಂಚಾರ ವಿಭಾಗದ 50 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮದ್ಯ ಸೇವಿಸಿದ್ದ ಚಾಲಕರ ವಿರುದ್ಧ 802 ಪ್ರಕರಣ ದಾಖಲಾಗಿದೆ. ಒಟ್ಟು 60,692 ವಾಹನಗಳನ್ನು ತಪಾಸಣೆ ನಡೆಸಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.