ADVERTISEMENT

ಬೆಂಗಳೂರು: ಬಾಲಕನಿಗೆ ಬೈಕ್‌ ನೀಡಿದ ಮಾಲೀಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 21:06 IST
Last Updated 22 ಜನವರಿ 2024, 21:06 IST
   

ಬೆಂಗಳೂರು: ಬಾಲಕನಿಗೆ ಬೈಕ್‌ ಚಾಲನೆ ಮಾಡಲು ಕೊಟ್ಟ ಮಾಲೀಕನಿಗೆ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯವು ₹ 22,200 ದಂಡ ವಿಧಿಸಿದೆ. ಬೈಕ್‌ ಮಾಲೀಕ ಸೆಲ್ವಂ(59)ನನ್ನು ನ್ಯಾಯಾಲಯ ದೋಷಿ ಎಂದು ಹೇಳಿದ್ದು ದಂಡ ವಿಧಿಸಿ ಆದೇಶಿಸಿದೆ.

ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಕಳೆದ ವರ್ಷದ ಜ.9ರಂದು ಸಂಜೆ 4.30ರ ಸುಮಾರಿಗೆ ಬಾಲಕನೊಬ್ಬ ಬೈಕ್‌ನಲ್ಲಿ ವಿಲೇ ನಡೆಸುತ್ತಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆತ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಆಗಿದ್ದರಿಂದ ಬಾಲ ನ್ಯಾಯಮಂಡಳಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಬಾಲಕ ‘ದೋಷಿ’ ಎಂದು ಸಾಬೀತಾಗಿತ್ತು. 2023ರ ಜೂನ್ 5ರಂದು ನ್ಯಾಯಾಲಯವು ಬಾಲಕನಿಗೆ ₹2 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಬಾಲಕನಿಗೆ ಬೈಕ್‌ ಚಾಲನೆ ಮಾಡಲು ನೀಡಿದ ಮಾಲೀಕನಿಗೆ ಸೋಮವಾರ ನ್ಯಾಯಾಲಯ ದಂಡ ವಿಧಿಸಿದೆ.

₹2.64 ಲಕ್ಷ ದಂಡ: ಏಕಮುಖ ರಸ್ತೆಯಲ್ಲಿ ವಾಹನ ಚಲಾಯಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಸಂಚಾರ ವಿಭಾಗದ ಪೊಲೀಸರು, 525 ಪ್ರಕರಣ ದಾಖಲಿಸಿಕೊಂಡು ₹2.64 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ADVERTISEMENT

ಏಕಮುಖ ರಸ್ತೆಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ಸೋಮವಾರ ಸಂಜೆ 6ರಿಂದ 7.30ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ವಾಹನಗಳ ಮಾದರಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.