ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ಗುರುವಾರ ಬೆಳಿಗ್ಗೆಯಿಂದ ರಾತ್ರಿ 8 ಗಂಟೆಯವರೆಗೆ ₹22.49 ಲಕ್ಷ ದಂಡ ಸಂಗ್ರಹವಾಗಿದೆ.
ರಿಯಾಯಿತಿ ಘೋಷಣೆ ಆದೇಶ ಹೊರಬೀಳುತ್ತಿದ್ದಂತೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ದಂಡ ಪಾವತಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 7,216 ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
ರಿಯಾಯಿತಿ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಂಚಾರ ಪೊಲೀಸರು, ‘2023ರ ಫೆಬ್ರುವರಿ 11ರೊಳಗಿನ ಪ್ರಕರಣಗಳಿಗೆ ರಿಯಾಯಿತಿ ಸೌಲಭ್ಯ ಅನ್ವಯವಾಗಲಿದೆ. ಸೆಪ್ಟೆಂಬರ್ 9ರವರೆಗೆ ದಂಡ ಪಾವತಿಸಲು ಅವಕಾಶವಿದೆ’ ಎಂದಿದ್ದಾರೆ.
‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಕೋರಿಕೆಯಂತೆ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ ಜಾರಿಗೆ ತರಲಾಗಿದೆ. ದಂಡ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು, ನಿಗದಿತ ಅವಧಿಯೊಳಗೆ ದಂಡ ಪಾವತಿಸ ಮಾಡಿ ರಶೀದಿ ಪಡೆದುಕೊಳ್ಳಬೇಕು’ ಎಂದೂ ಕೋರಿದ್ದಾರೆ.
ದಂಡ ಪಾವತಿ ಹೇಗೆ: ಸಂಚಾರ ನಿರ್ವಹಣೆ ಕೇಂದ್ರ (ಟಿಎಂಸಿ), ಸಂಚಾರ ಪೊಲೀಸ್ ಠಾಣೆಗಳಲ್ಲಿ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಂಡ ಪಾವತಿಸಬಹುದು. ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್ ಮೂಲಕ ದಂಡ ಪಾವತಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.