ಬೆಂಗಳೂರು: ‘ಏಕಮುಖ ರಸ್ತೆಯಲ್ಲಿ (ಒನ್ ವೇ) ವಾಹನ ಚಲಾಯಿಸಿ ಅಪಘಾತವನ್ನುಂಟು ಮಾಡುವ ಚಾಲಕರ ವಿರುದ್ಧ ಕೊಲೆ ಯತ್ನ (ಐಪಿಸಿ 307) ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಭಾಸ್ಕರ್ ರಾವ್ ತಿಳಿಸಿದರು.
ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಾಲಿನ ವಾಹನ ಡಿಕ್ಕಿ ಹೊಡೆದು ಕರ್ತವ್ಯನಿರತ ಎಎಸ್‌ಐ ವೆಂಕಟರಾಮು ಮೃತಪಟ್ಟ ಪ್ರಕರಣವನ್ನು ಪ್ರಸ್ತಾಪಿಸಿದ ಭಾಸ್ಕರ್ ರಾವ್, ‘ಸಂಚಾರ ನಿಯಮ ಉಲ್ಲಂಘನೆ ಆಗುವ ಹಾಗೂ ಅಪಘಾತ ಸಂಭವಿಸುವ ಅರಿವಿದ್ದರೂ ಚಾಲಕರು ಏಕಮುಖ ರಸ್ತೆಯಲ್ಲಿ ವಾಹನ ಓಡಿಸುತ್ತಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವಾಗುವುದರಿಂದ ಕೊಲೆ ಯತ್ನ ಪ್ರಕರಣ ದಾಖಲಿಸಲು ಅವಕಾಶವಿದೆ. ಆ ಬಗ್ಗೆ ಕಾನೂನು ತಜ್ಞರು ಹಾಗೂ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ’ ಎಂದರು.
ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
‘ಪಾನಮತ್ತರಾಗಿ ವಾಹನ ಚಲಾಯಿಸಿ ಸಾರ್ವಜನಿಕರ ಸಾವಿಗೆ ಕಾರಣವಾಗುವ ಚಾಲಕರ ವಿರುದ್ಧ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಸಾವು (ಐಪಿಸಿ-304) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಅಂಥ ಪ್ರಕರಣದಲ್ಲಿ ಪೊಲೀಸರು ಆಕ್ಷೇಪಣೆ ಸಲ್ಲಿಸದಿದ್ದರಿಂದ ಆರೋಪಿಗಳಿಗೆ ಬೇಗನೇ ಜಾಮೀನು ಸಿಗುತ್ತಿದೆ. ಪುರಾವೆಗಳನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
ಜಾಗವಿದ್ದರಷ್ಟೇ ವಾಹನ ಖರೀದಿಸಿ: ‘ನಿಮ್ಮ ಮನೆಯಲ್ಲಿ ಪಾರ್ಕಿಂಗ್‌ಜಾಗವಿದ್ದರೆ ಮಾತ್ರ ಕಾರು ಖರೀದಿಸಿ. ಅದನ್ನು ಬಿಟ್ಟು, 2-3 ಕಾರುಗಳನ್ನು ಖರೀದಿಸಿ ರಸ್ತೆಯಲ್ಲೇ ನಿಲ್ಲಿಸಿ ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಬೇಡಿ. ಆ ರೀತಿಯಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.
ಅವರು, ‘ಕೆಲವರು ಒಂದು ಕಾರನ್ನು ಮನೆಯ ಜಾಗದಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಾರನ್ನೂ ಖರೀದಿಸಿ, ಅದನ್ನು ರಸ್ತೆಯಲ್ಲೇ ನಿಲ್ಲಿಸುತ್ತಿದ್ದಾರೆ. ಇದರಿಂದ ಆ ರಸ್ತೆಯಲ್ಲಿ ಓಡಾಡುವ ಜನರಿಗೆ ತೊಂದರೆ ಆಗುತ್ತಿದೆ’ ಎಂದರು.
ನಗರದಿಂದ ಹೊರಕ್ಕೆ ಹೋಗಿ: ‘ಶಾಲೆಗಳು ಇರುವ ರಸ್ತೆಗಳಲ್ಲೇ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಶಾಲೆ ಆರಂಭವಾಗುವ ಹಾಗೂ ಬಿಡುವ ವೇಳೆ ಅಂಥ ರಸ್ತೆಗಳಲ್ಲಿ ಸಂಚರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ’ ಎಂದರು.
‘ಮಕ್ಕಳನ್ನು ಕರೆತರುವ ವಾಹನಗಳನ್ನು ಶಾಲಾ ಆಡಳಿತ ಮಂಡಳಿತಮ್ಮ ಕ್ಯಾಂಪಸ್‌ನಲ್ಲೇ ನಿಲ್ಲಿಸಿಕೊಳ್ಳಬೇಕು. ಶಾಲೆ ಎದುರಿನ ರಸ್ತೆಯಲ್ಲಿ ನಿಲ್ಲಿಸಬಾರದು. ಜಾಗವಿಲ್ಲದಿದ್ದರೆ ನಗರದಿಂದ ಹೊರಕ್ಕೆ ಹೋಗಿ. ಜನರಿಗೆ ತೊಂದರೆ ನೀಡಬೇಡಿ’ ಎಂದು ತಿಳಿಸಿದರು.
ಸಿಬಿಡಿಯಲ್ಲೇ ದಟ್ಟಣೆ ಹೆಚ್ಚು: ‘ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅದರ ನಿಯಂತ್ರಣಕ್ಕೆ ದಿನದ 24 ಗಂಟೆಯೂ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಭಾಸ್ಕರ್ ರಾವ್ ಹೇಳಿದರು.
‘ಮುಖ್ಯರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್’
‘ನಗರದ ಮುಖ್ಯರಸ್ತೆಗಳಲ್ಲೇ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇಂಥ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸುವಂತೆ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ಭಾಸ್ಕರ್ ರಾವ್ ತಿಳಿಸಿದರು.
‘ಸಾರ್ವಜನಿಕರ ವಾಹನಗಳಿಗೆ ಪೇ ಪಾರ್ಕಿಂಗ್ ಸೇವೆ ಆರಂಭಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಸಾರಿಗೆ ಬಸ್‍ಗಳ ನಿಲುಗಡೆಗೆ ನಿರ್ದಿಷ್ಟ ಜಾಗದಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
ಎರಡೇ ದಿನಕ್ಕೆ ₹ 30.11 ಲಕ್ಷ ದಂಡ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ನಗರದಲ್ಲಿ ಎರಡೇ ದಿನದಲ್ಲಿ ₹ 30.11 ಲಕ್ಷ ದಂಡ ಸಂಗ್ರಹಿಸಲಾಗಿದೆ.
‘ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೊಸ ಆದೇಶದ ಪ್ರಕಾರ, ಬುಧವಾರ ಹಾಗೂ ಗುರುವಾರ ಮಧ್ಯಾಹ್ನದವರೆಗೆ ತಪ್ಪಿತಸ್ಥರ ವಿರುದ್ಧ 2,978 ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
‘ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳೇ ಹೆಚ್ಚಿವೆ. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿರುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗಿದೆ. ಪಾನಮತ್ತರಾಗಿ ವಾಹನ ಚಲಾಯಿಸಿದ್ದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಮಾಡಿ ನೋಟಿಸ್ ನೀಡಲಾಗಿದ್ದು, ಅವರಿಗೆಲ್ಲ ನ್ಯಾಯಾಲಯವೇ ದಂಡ ವಿಧಿಸಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.