ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ 6.04 ಲಕ್ಷ ಸಾರ್ವಜನಿಕ ಸೇವಾ ವಾಹನಗಳ ಪೈಕಿ 5.94 ಲಕ್ಷ ವಾಹನಗಳಲ್ಲಿ ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಉಪಕರಣ ಇನ್ನೂ ಅಳವಡಿಕೆಯಾಗಿಲ್ಲ.
ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿ ಕ್ಯಾಬ್, ಮೋಟಾರ್ ಕ್ಯಾಬ್ ಸೇರಿದಂತೆ ಎಲ್ಲ ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಉಪಕರಣ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ನವೆಂಬರ್ 30ರವರೆಗೆ ಗಡುವು ನೀಡಿದೆ. ಈ ಅವಧಿಯಲ್ಲಿ ಬಟನ್ ಅಳವಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಹಿಂದಿನ ನಿಯಮದ ಪ್ರಕಾರ, ಇಂತಹ ವಾಹನಗಳಿಗೆ ಕೆಲವು ನಗರಗಳಲ್ಲಿ ಮಾತ್ರ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಲಾಗಿತ್ತು. ಈಗ ದೇಶದ್ಯಾದಂತ ಕಡ್ಡಾಯಗೊಳಿಸಲಾಗಿದೆ.
ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶ ಹೊರಡಿಸಿದೆ. ಜೊತೆಗೆ, ಯಾವ ರೀತಿ ಜಾರಿಗೊಳಿಸಬೇಕು ಎಂಬ ಮಾರ್ಗಸೂಚಿಯನ್ನು ನೀಡಿದೆ. ಇದೇ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಆದೇಶ ನೀಡಿದೆ.
ಕಾಂಟ್ರಾಕ್ಟ್ ಕ್ಯಾರೇಜ್ ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿಕ್ಯಾಬ್, ಮೋಟಾರ್ ಕ್ಯಾಬ್ ಮತ್ತು ರಾಷ್ಟ್ರೀಯ ರಹದಾರಿ (ಪರ್ಮಿಟ್) ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಸುವುದು ಕಡ್ಡಾಯವಾಗಿದೆ.
‘ರಾಜ್ಯದಲ್ಲಿ ಸೆಪ್ಟೆಂಬರ್ 30ರವರೆಗೆ 10,517 ವಾಹನಗಳಲ್ಲಿ ಮಾತ್ರ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಉಳಿದ ವಾಹನಗಳಲ್ಲಿ ಈ ನಿಯಮಗಳನ್ನು ಪಾಲಿಸದಿದ್ದರೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಬೇರೆ ರಾಜ್ಯಗಳಲ್ಲಿ ಈ ಉಪಕರಣಗಳನ್ನು ಅಳವಡಿಸಿಕೊಳ್ಳಲು ₹ 6 ಸಾವಿರದಿಂದ ₹7 ಸಾವಿರ ದರ ನಿಗದಿಪಡಿಸಿವೆ. ಆದರೆ, ನಮ್ಮ ರಾಜ್ಯದಲ್ಲಿ ₹ 11 ಸಾವಿರದಿಂದ ₹ 12 ಸಾವಿರದವರೆಗೆ ದರ ನಿಗದಿಪಡಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ್ ಶರ್ಮಾ ದೂರಿದರು.
‘ಸರಕು ಸಾಗಣೆ ವಾಹನಗಳಲ್ಲಿಯೂ ಈ ಉಪಕರಣಗಳನ್ನು ಅಳವಡಿಕೆಗೆ ಕಡ್ಡಾಯಗೊಳಿಸಿರುವುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.