ADVERTISEMENT

24ರಿಂದ ಸಾರಿಗೆ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:54 IST
Last Updated 19 ಮಾರ್ಚ್ 2023, 20:54 IST
   

ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಆದೇಶಕ್ಕೆ ನೌಕರರ ಜಂಟಿ ಕ್ರಿಯಾ ಸಮಿತಿ ಸಹಮತ ವ್ಯಕ್ತಪಡಿಸಿದ್ದರೆ, ನೌಕರರ ಸಮಾನ ಮನಸ್ಕರ ವೇದಿಕೆ ಪೂರ್ವ ನಿಗದಿಯಂತೆ ಮಾರ್ಚ್ 24ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದೆ.

ಶೇ 15ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಇದನ್ನು ಒಪ್ಪಿಕೊಂಡಿರುವ ಜಂಟಿ ಕ್ರಿಯಾಸಮಿತಿ, ಮಾರ್ಚ್‌ 21ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರ ಕೈಬಿಟ್ಟಿದೆ. ಸಮಿತಿಯ ನೇತೃತ್ವ ವಹಿಸಿದ್ದ ಎಚ್.ವಿ.ಅನಂತಸುಬ್ಬರಾವ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಜಂಟಿ ಕ್ರಿಯಾ ಸಮಿತಿ ಜತೆ ಗುರುತಿಸಿಕೊಳ್ಳದ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದ ಸಮಾನ ಮನಸ್ಕರ ವೇದಿಕೆ, ‘ಮುಷ್ಕರ ಅಚಲ’ ಎಂದು ಹೇಳಿದೆ.

ADVERTISEMENT

‘ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರಿಲ್ಲ. ಆದ್ದರಿಂದ ಮುಷ್ಕರ ಹಿಂಪಡೆಯುವುದಿಲ್ಲ. ಮಾಡಿ ಇಲ್ಲವೇ ಮಡಿ ಹೋರಾಟ ನಡೆಯಲಿದೆ’ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು.

‘ಮುಷ್ಕರ ವಾಪಸ್ ಪಡೆದ ಸಂಘಟನೆ ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಗೊಂದಲ ಸೃಷ್ಟಿಸಿ ಮುಷ್ಕರ ವಾಪಸ್ ಪಡೆದಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.