ADVERTISEMENT

ಟ್ರಾವೆಲ್ ಏಜೆನ್ಸಿ ವಂಚನೆ: ಬಾಗ್ದಾದ್‌ನಲ್ಲಿ ಸಿಲುಕಿದ್ದ 10 ಪ್ರವಾಸಿಗರು

ಹಿಂತಿರುಗಲು ಟಿಕೆಟ್‌ ಮಾಡಿಕೊಡದೆ ವಂಚಿಸಿದ ಟ್ರಾವೆಲ್ ಏಜೆನ್ಸಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 5:54 IST
Last Updated 27 ಡಿಸೆಂಬರ್ 2019, 5:54 IST
ಬಾಗ್ದಾದ್ ನಗರ
ಬಾಗ್ದಾದ್ ನಗರ   

ಬೆಂಗಳೂರು: ಇರಾಕ್‌ನಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ತೆರಳಿದ್ದ 10 ಮಂದಿ ಆಸರೆ ಮತ್ತು ಆಹಾರ ಇಲ್ಲದೆ ಬಾಗ್ದಾದ್‌ನಲ್ಲಿ 15 ದಿನಗಳನ್ನು ಸಂಕಷ್ಟದಿಂದ ಕಳೆದ ಪ್ರಕರಣ ಬಯಲಿಗೆ ಬಂದಿದೆ. ಟ್ರಾವಲ್‌ ಏಜೆನ್ಸಿಯವರು ಮರಳಿ ಬರುವ ಟಿಕೆಟ್‌ ಕಾಯ್ದಿರಿಸದ ಪರಿಣಾಮ ಪ್ರವಾಸಿಗರು ಸಮಸ್ಯೆ ಎದುರಿಸುವಂತಾಗಿತ್ತು.

ರಾಜ್ಯದ ಅಲ್ಪಸಂಖ್ಯಾತ ಆಯೋಗದ ಮಧ್ಯಪ್ರವೇಶದಿಂದ ಅವರೆಲ್ಲರೂ ಗುರುವಾರ ಸುರಕ್ಷಿತವಾಗಿ ನಗರಕ್ಕೆ ವಾಪಸಾಗಿದ್ದಾರೆ.

ಇರಾಕ್‌ನಲ್ಲಿರುವ ವಿವಿಧ ಧಾರ್ಮಿಕ ಸ್ಥಳಗಳನ್ನು ವೀಕ್ಷಿಸಿ, ಮರಳಲು ಟೂರ್‌ ಪ್ಯಾಕೇಜ್‌ಗೆ ಪ್ರತಿಯೊಬ್ಬರಿಂದ ಟ್ರಾವಲ್‌ ಸಂಸ್ಥೆ ₹ 65 ಸಾವಿರ ಪಡೆದಿತ್ತು. ಆದರೆ, ಸಂಸ್ಥೆಯ ಮಾಲೀಕ ಪಾಷಾ ಅವರು ಈ 10 ಮಂದಿ ಭಾರತಕ್ಕೆ ಮರಳಲು ಟಿಕೆಟ್‌ ಮಾಡಿಕೊಡದ ಕಾರಣ, ಅವರೆಲ್ಲರೂ ಅನಿವಾರ್ಯವಾಗಿ ಬಾಗ್ದಾದ್‌ನಲ್ಲೇ ಉಳಿಯುವಂತಾಗಿತ್ತು. ಈ ಬಗ್ಗೆ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಅವರು ಆಲ್‌ ಫಝೀಲ್‌ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಮಾಲೀಕರಾದ ಫಾಹಿಮ್‌ ಪಾಷಾ (50) ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದರು.

ADVERTISEMENT

‘ಪಾಷಾ ಅವರು ಸಂತ್ರಸ್ತರಿಂದ ಒಟ್ಟು ₹ 35.10 ಲಕ್ಷ ಸಂಗ್ರಹಿಸಿದ್ದಾರೆ. ಆದರೆ, ಅವರಿಗೆ ವಾಪಸು ಬರಲು ಟಿಕೆಟ್‌ ಮಾಡಿರಲಿಲ್ಲ. ಹೀಗಾಗಿ, ಅವರು ಬಾಗ್ದಾದ್‌ನಲ್ಲಿ ಕಷ್ಟ ಅನುಭವಿಸಬೇಕಾಯಿತು. ಈ ಪೈಕಿ, ಕೆಲವರು ನನಗೆ ಕರೆ ಮಾಡಿ ಮಾಹಿತಿ ನೀಡಿದರು’ ಎಂದು ಅಬ್ದುಲ್‌ ಅಜೀಂ ತಿಳಿಸಿದರು.

ದೂರು ಬಂದ ತಕ್ಷಣವೇ ಪೊಲೀಸರು ಪಾಷಾ ಅವರ ಕಚೇರಿಗೆ ದಾಳಿ ನಡೆಸಿದ್ದರು. ಪಾಷಾ ಅವರನ್ನು ವಶಕ್ಕೆ ಪಡೆದ ಪೊಲೀಸರು, ಬಾಗ್ದಾದ್‌ನಲ್ಲಿ ಇರುವ ಪ್ರವಾಸಿಗರು ನಗರಕ್ಕೆ ವಾಪಸು ಬರಲು ಟಿಕೆಟ್‌ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅವರು ಟಿಕೆಟ್‌ ವ್ಯವಸ್ಥೆ ಮಾಡಿದ ಬಳಿಕ ಎಲ್ಲ ಪ್ರವಾಸಿಗರು ಸುರಕ್ಷಿತವಾಗಿ ಮರಳಿದರು. ಅಲ್ಲಿಯವರೆಗೆ ಪಾಷಾ ಅವರನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು.

‘ಧಾರ್ಮಿಕ ಸ್ಥಳಗಳಿಗೆ ಪ್ರವಾಸ ವ್ಯವಸ್ಥೆ ಮಾಡುವ ಆಮಿಷ ಒಡ್ಡಿ ವೃದ್ಧರನ್ನು ಹಲವು ಟ್ರಾವೆಲ್‌ ಏಜೆನ್ಸಿಗಳು ವಂಚಿಸುತ್ತಿವೆ. ಅಂಥ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ’ ಎಂದು ಅಬ್ದುಲ್ ಅಜೀಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.