ಬೆಂಗಳೂರು: ಮದ್ಯ ಸೇವಿಸಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ ಆರೋಪದ ಅಡಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಹಾಗೂ ವಾರ್ಡ್ ಬಾಯ್ ವಿರುದ್ಧ ಎನ್‌ಸಿಆರ್ ದಾಖಲಾಗಿದೆ.
‘ತೀವ್ರ ಜ್ವರದಿಂದ ಬಳಲುತ್ತಿದ್ದ ಸ್ನೇಹಾ ಭಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯ ಪ್ರದೀಪ್ ಹಾಗೂ ವಾರ್ಡ್ ಬಾಯ್ ಮಹೇಂದ್ರ ಅವರು ಚಿಕಿತ್ಸೆ ನೀಡಿದ್ದರು. ಅಲ್ಲದೇ ಮದ್ಯದ ಅಮಲಿನಲ್ಲಿ ನಾಲ್ಕರಿಂದ ಐದು ಬಾರಿ ರೋಗಿಗೆ ಚುಚ್ಚುಮದ್ದು ನೀಡಿದ್ದರು. ರೋಗಿ ಜತೆಗೆ ಅಸಭ್ಯವಾಗಿಯೂ ವರ್ತನೆ ತೋರಿದ್ದರು’ ಎಂದು ಆರೋಪಿಸಿ ದೂರು ನೀಡಲಾಗಿದೆ.
‘ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ್ದ ಆರೋಪದ ಅಡಿ ರೋಗಿಯ ಸಂಬಂಧಿಕರು ದೂರು ನೀಡಿದ್ದಾರೆ. ದಾಖಲೆಗಳನ್ನು ಸಂಗ್ರಹಿಸಿ ವೈದ್ಯಕೀಯ ಮಂಡಳಿಗೆ ಮಾಹಿತಿ ನೀಡಲಾಗಿದೆ. ಮಂಡಳಿಯಿಂದ ಪ್ರತಿಕ್ರಿಯೆ ಬಂದ ಬಳಿಕ ಇಬ್ಬರ ವಿರುದ್ದವೂ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿಗೆ ತರಾಟೆ: ಮದ್ಯದ ಅಮಲಿನಲ್ಲಿ ವೈದ್ಯ ಹಾಗೂ ವಾರ್ಡ್ ಬಾಯ್ ಇರುವುದನ್ನು ಗಮನಿಸಿದ್ದ ಸ್ನೇಹಾ ಭಟ್ ಸಂಬಂಧಿಕರು, ಇಬ್ಬರನ್ನೂ ತರಾಟೆ ತೆಗೆದುಕೊಂಡಿದ್ದರು.
‘ನಿರ್ಲಕ್ಷ್ಯ ತೋರಿದ ವೈದ್ಯರನ್ನು ಪ್ರಶ್ನಿಸಿದ ಮೇಲೆ ಆಸ್ಪತ್ರೆಯಿಂದಲೇ ಅವರು ಪರಾರಿ ಆಗಿದ್ದರು. ಮದ್ಯ ಸೇವಿಸಿ ಚಿಕಿತ್ಸೆ ನೀಡಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ರೋಗಿಯ ಸಂಬಂಧಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.