ಬೆಂಗಳೂರು: ‘ಗಡುವು ಮುಗಿದು ಮೂರು ತಿಂಗಳಾದರೂ ಮರಗಣತಿ ಕಾರ್ಯ ಆರಂಭಿಸಿಲ್ಲ’ ಎಂಬ ಅರ್ಜಿದಾರರ ಆಕ್ಷೇಪಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತಂತೆ ದತ್ತಾತ್ರೇಯ ಟಿ. ದೇವರೆ ಮತ್ತು ’ಬೆಂಗಳೂರು ಎನ್ವಿರಾನ್‍ಮೆಂಟ್ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಮರಗಣತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಸಾಕಷ್ಟು ತಪ್ಪುಗಳಿವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
‘ಈ ಪ್ರಕರಣದಲ್ಲಿ ಅಧಿಕಾರಿಗಳು ಎಲ್ಲೆಲ್ಲಿ ತಪ್ಪು ಮಾಡಿದ್ದಾರೆ, ಹೇಗೆ ತಪ್ಪಾಗಿದೆ, ಅದಕ್ಕೆ ಕಾರಣವೇನು, ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುವುದು ಎಂಬುದರ ಕುರಿತು ಪ್ರಮಾಣಪತ್ರ ಸಲ್ಲಿಸಿ’ ಎಂದು ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆಗೆ ನಿರ್ದೇಶಿಸಿತು. ವಿಚಾರಣೆಯನ್ನು ಫೆ.11ಕ್ಕೆ ಮುಂದೂಡಲಾಗಿದೆ.
ಆಕ್ಷೇಪ ಏನು?: ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರ ಗಣತಿಗೆ ಸಂಬಂಧಿಸಿದಂತೆ 2019ರ ಆಗಸ್ಟ್ 20ರಂದು ಹೈಕೋರ್ಟ್ ವಿವರವಾದ ಆದೇಶ ನೀಡಿತ್ತು. ಒಂದು ತಿಂಗಳಲ್ಲಿ ಗಣತಿ ಕಾರ್ಯ ಆರಂಭಿಸುವುದಾಗಿ ಅಕ್ಟೋಬರ್ 10ರಂದು ಬಿಬಿಎಂಪಿ ಹೈಕೋರ್ಟ್‍ಗೆ ಮುಚ್ಚಳಿಕೆ ಸಲ್ಲಿಸಿತ್ತು. ಆದರೆ, ಗಣತಿ ಕಾರ್ಯ ಇನ್ನೂ ಆರಂಭಿಸಲಾಗಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.