ADVERTISEMENT

ಮೆಟ್ರೊ ಹಳಿ ಮೇಲೆ ಮರ: ಭಾರಿ ಕಾರ್ಯಾಚರಣೆ ನಂತರ ರೈಲು ಸಂಚಾರ ಪುನರಾರಂಭ

‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಭಾನುವಾರ ಹಳಿ ಮೇಲೆ ಮರ ಬಿದ್ದು ಎಂ.ಜಿ. ರಸ್ತೆ–ಇಂದಿರಾನಗರ ನಡುವೆ ಸ್ಥಗಿತಗೊಂಡಿದ್ದ ಮೆಟ್ರೊ ಸಂಚಾರ ಸೋಮವಾರ ಬೆಳಿಗ್ಗೆ ಆರಂಭಗೊಂಡಿತು.

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 14:02 IST
Last Updated 3 ಜೂನ್ 2024, 14:02 IST
<div class="paragraphs"><p>ಮೆಟ್ರೊ ನೇರಳೆ ಮಾರ್ಗದಲ್ಲಿ ಇಂದಿರಾನಗರ– ಎಂ.ಜಿ.ರಸ್ತೆ ಮಧ್ಯೆ ರೈಲು ಸಂಚಾರ ಪುನರಾರಂಭಗೊಂಡಿತು</p></div>

ಮೆಟ್ರೊ ನೇರಳೆ ಮಾರ್ಗದಲ್ಲಿ ಇಂದಿರಾನಗರ– ಎಂ.ಜಿ.ರಸ್ತೆ ಮಧ್ಯೆ ರೈಲು ಸಂಚಾರ ಪುನರಾರಂಭಗೊಂಡಿತು

   

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಭಾನುವಾರ ಸಂಜೆ ಹಳಿ ಮೇಲೆ ಮರ ಬಿದ್ದು ಎಂ.ಜಿ. ರಸ್ತೆ–ಇಂದಿರಾನಗರ ನಡುವೆ ಸ್ಥಗಿತಗೊಂಡಿದ್ದ ಮೆಟ್ರೊ ಸಂಚಾರ ಸೋಮವಾರ ಬೆಳಿಗ್ಗೆ ಆರಂಭಗೊಂಡಿತು. 

ಭಾನುವಾರ ರಾತ್ರಿ 7.25ರ ಹೊತ್ತಿಗೆ ಟ್ರಿನಿಟಿ ಮೆಟ್ರೊ ನಿಲ್ದಾಣದ ಬಳಿ ಮರವೊಂದು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದು, ಅದರ ಕೊಂಬೆಯೊಂದು ಮೆಟ್ರೊ ಹಳಿವರೆಗೆ ಚಾಚಿದ್ದರಿಂದ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ADVERTISEMENT

ರಾಜ್ಯ ವಿಪತ್ತು ರಕ್ಷಣಾ ಪಡೆ, ಕರ್ನಾಟಕ ಅಗ್ನಿಶಾಮಕ ಇಲಾಖೆ, ಬಿಬಿಎಂಪಿ ಮತ್ತು ಪೊಲೀಸರು ಘಟನೆಯ ಸ್ಥಳದಲ್ಲಿ ಸುರಕ್ಷತೆ ಮತ್ತು ತೆರವು ಕಾರ್ಯಾಚರಣೆಗೊಳಿಸಲು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಯಾಡಕ್ಟ್ ಮಾರ್ಗದಲ್ಲಿ ಅಡ್ಡವಾಗಿ ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲು ಮತ್ತು ರೈಲು ಕಾರ್ಯಾಚರಣೆಗೆ ಅನೂಕೂಲವಾಗುವಂತೆ ಪ್ರಕ್ರಿಯೆಯನ್ನು ವೇಗಗೊಳಿಸಲು ವಿಶೇಷ ಸಾಧನಗಳನ್ನು ಉಪಯೋಗಿಸಲಾಯಿತು. ಭಾರಿ ಮಳೆಯ ನಡುವೆಯೂ ನುರಿತ ಕಾರ್ಮಿಕರು ಮತ್ತು ಪಾಲುದಾರರ ತಂಡ ಬಿದ್ದ ಮರವನ್ನು ಕತ್ತರಿಸಿ ತೆಗೆಯಲು ಸುಮಾರು 4 ಗಂಟೆ ಶ್ರಮಿಸಿದರು.

ಹಳಿ ಭದ್ರತೆಯನ್ನು ಪರೀಕ್ಷಿಸಲಾಯಿತು. ವಿದ್ಯುತ್‌ ಸರಬರಾಜು ಸರಿ ಇದೆಯೇ ಎಂದು ನೋಡಲಾಯಿತು. ಸಿಗ್ನಲಿಂಗ್‌ ಹೊಂದಾಣಿಕೆ ಮಾಡಲಾಯಿತು. ವಿವಿಧ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ನಿಗಮದ ಅಗ್ನಿಶಾಮಕ, ಭದ್ರತೆ, ಹೌಸ್‌ಕೀಪಿಂಗ್, ಟ್ರ್ಯಾಕ್, ಥರ್ಡ್ ರೈಲ್ ಟ್ರಾಕ್ಷನ್ ವ್ಯವಸ್ಥೆ, ಸಿಗ್ನಲಿಂಗ್ ವಿಭಾಗಗಳ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಸಮಗ್ರ ತಪಾಸಣೆ ನಡೆಸಲಾಯಿತು.

ವಿವಿಧ ಪರೀಕ್ಷೆಗಳು ಮುಗಿದ ಬಳಿಕ ಮುಂಜಾನೆ 4.30ರ ಹೊತ್ತಿಗೆ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಎಲ್ಲ ಪರೀಕ್ಷೆಗಳನ್ನು ರಾತ್ರಿಯೇ ನಡೆಸಿದ್ದರಿಂದ ಸೋಮವಾರ ಬೆಳಿಗ್ಗೆ ಮೆಟ್ರೊ ಕಾರ್ಯಾಚರಣೆ ಶುರು ಮಾಡಲು ಸಾಧ್ಯವಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.