ಬೆಂಗಳೂರು: ಮರಗಳ ಕುರಿತು ಮಾಹಿತಿ ಒದಗಿಸುವ ಉದ್ದೇಶದಿಂದ ವೃಕ್ಷ ಫೌಂಡೇಷನ್ ಆರಂಭಿಸಿರುವ ‘ವೃಕ್ಷ ಯೋಜನೆ’ಯ ಭಾಗವಾಗಿ ತಂತ್ರಜ್ಞಾನ ಆಧರಿತ ಪ್ರಾಯೋಗಿಕ ಮರ ಗಣತಿಯನ್ನು ಜಯನಗರದಲ್ಲಿ ಭಾನುವಾರ ಆರಂಭಿಸಲಾಯಿತು.
ಜಯನಗರದ ಶಾಸಕರ ಕಚೇರಿ ಮುಂಭಾಗದ ಮರವೊಂದರ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಮೂಲಕನಿವೃತ್ತ ಅರಣ್ಯ ಅಧಿಕಾರಿ ಎಸ್.ಜಿ.ನೇಗಿನಹಾಳ್ ಅವರು ಗಣತಿಗೆ ಚಾಲನೆ ನೀಡಿದರು.
‘ದೇಶದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ತಂತ್ರಾಂಶವನ್ನು ಬಳಸಿ ಮರ ಗಣತಿ ಮಾಡಲಾಗುತ್ತಿದೆ. ಈಗಾಗಲೇ ಮೂರು ವಾರ್ಡ್‌ಗಳಲ್ಲಿರುವ 5,500 ಮರಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಮಾಹಿತಿಯನ್ನು ವೃಕ್ಷಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಆಲೋಚನೆ ಇದೆ. ಕಳೆದ ಎಂಟು ವರ್ಷಗಳಿಂದ ವೃಕ್ಷ ಯೋಜನೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ’ ಎಂದು ಈ ಯೋಜನೆಯ ರೂವಾರಿ ವಿಜಯ್ ನಿಶಾಂತ್ ತಿಳಿಸಿದರು.
‘ಮರಗಳ ಗಣತಿಯಿಂದ ನಗರದ ಜೀವವೈವಿಧ್ಯ ಕುರಿತು ನಿರ್ದಿಷ್ಟ ಮಾಹಿತಿ ಲಭಿಸುತ್ತದೆ. ಸರ್ಕಾರವೂ ಈ ದತ್ತಾಂಶವನ್ನು ಬಳಸಿಕೊಳ್ಳಬಹುದು. ಇದರಿಂದ ಸಂಶೋಧಕರಿಗೂ ಅನುಕೂಲವಾಗಲಿದೆ. ಬೇರೆ ನಗರಗಳಲ್ಲಿಯೂ ಯೋಜನೆಯನ್ನು ಅನುಷ್ಠಾನಗೊಳಿಸುವ ಯೋಚನೆ ಇದೆ’ ಎಂದರು.
‘ನಗರದಲ್ಲಿರುವ ಎಲ್ಲಾ ವಿಧದ ಮರಗಳ ಮಾಹಿತಿ ಜಾಲತಾಣದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮರಗಳ್ಳರ ಮೇಲೆ ಕಣ್ಣಿಡಲೂ ಇದು ನೆರವಾಗಲಿದೆ. ಮರ ಕಡಿದರೆ, ಅದರ ಮಾಹಿತಿಯೂ ಲಭ್ಯವಾಗಲಿದೆ. ಮರ ಏಕೆ ನಾಶವಾಯಿತು ಎಂದು ಜನರು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು’ ಎಂದು ಅವರು ಹೇಳಿದರು.
ಏನಿದು ವೃಕ್ಷ ಯೋಜನೆ?: ಅಭಿವೃದ್ಧಿ ಮತ್ತು ಆಧುನೀಕರಣದ ಹೆಸರಿನಲ್ಲಿ ಆಗುತ್ತಿರುವ ಮರಗಳ ಮಾರಣ ಹೋಮವನ್ನು ಗಮನಿಸಿದ ಸಸ್ಯ ವೈದ್ಯ ವಿಜಯ್ ನಿಶಾಂತ್, ನಗರದ ಮರಗಳ ಮಾಹಿತಿಯನ್ನು ಒಳಗೊಂಡ ದಾಖಲೆ ತಯಾರಿಸಬೇಕು ಎನ್ನುವ ಪಣತೊಟ್ಟು 2010ರಲ್ಲಿ ಸ್ನೇಹಿತರೊಂದಿಗೆ ಸೇರಿ ವೃಕ್ಷ ಯೋಜನೆಯನ್ನು ಆರಂಭಿಸಿದರು.
ಜಯನಗರ, ಬೈರಸಂದ್ರ ಮತ್ತು ಪಟ್ಟಾಭಿರಾಮನಗರದಲ್ಲಿ ಪ್ರಾಯೋಗಿಕವಾಗಿ ಮರಗಳ ಗಣತಿ ಮಾಡಿ ಕಾಗದದಲ್ಲಿಯೇದತ್ತಾಂಶವನ್ನು ನಮೂದಿಸುತ್ತಿದ್ದರು. ತರುವಾಯ ವೆಬ್‌ಸೈಟ್ ಆರಂಭಿಸಲಾಯಿತು. ಅದಕ್ಕೆ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತಿತ್ತು. ಇದೀಗಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಮೊಬೈಲ್ ಆ್ಯಪ್ ಶೀಘ್ರ
ಮರಗಳ ಮಾಹಿತಿಗಾಗಿ ಮೊಬೈಲ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್‌ಜಿ.ಪಿ.ಎಸ್ ಆಧರಿತ ನಿಖರ ದತ್ತಾಂಶವನ್ನು ನೀಡುತ್ತದೆ. ಆ್ಯಪ್ ಉಪಯೋಗಿಸಿಮರಗಳ ಹೆಸರು, ಪ್ರಬೇಧ, ಪ್ರಸ್ತುತ ಸ್ಥಿತಿ, ಪ್ರದೇಶ ಮತ್ತು ಮರಗಳಇತರ ಗುಣಲಕ್ಷಣಗಳನ್ನು ತಿಳಿದುಕೊಳ್ಳಬಹುದು. ಸಾರ್ವಜನಿಕರಿಗೆ ಈ ಆ್ಯಪ್ ಇದೇ ವರ್ಷದ ಜೂನ್‌ನಲ್ಲಿ ಲಭ್ಯವಾಗಲಿದೆ.
‘ಮೊದಲು ಕಾಗದದಲ್ಲಿ ಕೈಯಿಂದಲೇ ಮರಗಳ ವಿವರಗಳನ್ನು ನಮೂದಿಸುತ್ತಿದ್ದೆವು. ಬಳಿಕ ಟ್ಯಾಬ್‌ಗೆ ತಕ್ಕಂತೆ ವೆಬ್‌ಸೈಟ್ ರೂಪಿಸಿದೆವು. ಈಗ ಮೊಬೈಲ್ ಬಳಕೆ ಸಾಮಾನ್ಯವಾಗಿರುವುದರಿಂದ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ’ ಎಂದು ವೃಕ್ಷಫೌಂಡೇಷನ್‌ನ ಸಹ ಸಂಸ್ಥಾಪಕಆರ್.ರವಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.