ಬೆಂಗಳೂರು: ‘ಬಾಡಿಗೆ ತಾಯ್ತನ ಹೊಂದಬಯಸುವವರಿಗೆ ಸಕ್ಷಮ ಪ್ರಾಧಿಕಾರವು ಅರ್ಹತಾ ಪ್ರಮಾಣ ಪತ್ರ ನೀಡುವ ಮುನ್ನ ಅವರ ಆನುವಂಶಿಕ, ದೈಹಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು (ಜೆನೆಟಿಕ್, ಫಿಸಿಕಲ್ ಹಾಗೂ ಎಕನಾಮಿಕ್) ಪರಿಗಣಿಸುವ ಅವಶ್ಯಕತೆ ಇದೆ‘ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ ನಗರದ 57 ವರ್ಷದ ವ್ಯಕ್ತಿ ಮತ್ತವರ 45 ವರ್ಷದ ಪತ್ನಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಪ್ರಕರಣದಲ್ಲಿ ಬಾಡಿಗೆ ತಾಯ್ತನ ಕಾಯ್ದೆ-2021ರ ಕಲಂ 2(1)(ಝಡ್ ಜಿ) ಹಾಗೂ ಕಲಂ 4(3)(ಸಿ)(ಈ) ಅನ್ನು ಆಕ್ಷೇಪಿಸಿದ್ದ ಅರ್ಜಿದಾರರು, ‘ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಯಸುವ ಪುರುಷರಿಗೆ 55 ವರ್ಷ ಮೀರಿರಬಾರದು ಹಾಗೂ ಬಾಡಿಗೆ ತಾಯಿಯಾಗುವ ಮಹಿಳೆ; ಮಗು ಬಯಸುವ ದಂಪತಿಯೊಂದಿಗೆ ಅನುವಂಶಿಕ ಸಂಬಂಧ ಹೊಂದಿರಬೇಕು’ ಎಂಬ ನಿಯಮಗಳನ್ನು ಪ್ರಶ್ನಿಸಿದ್ದರು.
ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ, ‘ಅರ್ಜಿದಾರರು ಪ್ರಶ್ನಿಸಿರುವ ನಿಯಮಗಳ ಕುರಿತಂತೆ ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಅನ್ಯ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಹೀಗಾಗಿ, ಅರ್ಜಿದಾರರು ಆಕ್ಷೇಪಿಸಿರುವ ಅಂಶಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗದು. ಆದರೆ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವವರು ಆನುವಂಶಿಕ, ದೈಹಿಕ ಹಾಗೂ ಆರ್ಥಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಗತ್ಯವಿದೆ. ಆದ್ದರಿಂದ, ಅರ್ಜಿದಾರರು ಈ ತ್ರಿವಳಿ ಪರೀಕ್ಷೆಗೆ ಒಳಪಡಬೇಕು’ ಎಂದು ಸೂಚಿಸಿದೆ.
‘ಈ ಸಂಬಂಧ ಅರ್ಜಿದಾರರು ಸಲ್ಲಿಸುವ ಅರ್ಜಿಯನ್ನು ಸಕ್ಷಮ ಪ್ರಾಧಿಕಾರವು ನಾಲ್ಕು ವಾರಗಳಲ್ಲಿ ಪರಿಗಣಿಸಿ ಅರ್ಹತಾ ಪ್ರಮಾಣಪತ್ರ ವಿತರಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ರಾಜ್ಯ ಬಾಡಿಗೆ ತಾಯ್ತನ ಮಂಡಳಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?: ಅರ್ಜಿದಾರರು ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕ. ಪತ್ನಿ ಗೃಹಿಣಿ. ಮದುವೆಯ ನಂತರ ಪುತ್ರ ಜನಿಸಿದ್ದ. ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಪುತ್ರ 23ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ. ಏತನ್ಮಧ್ಯೆ ಪತ್ನಿ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಅವರ ಗರ್ಭಕೋಶ ತೆಗೆಸಿಕೊಂಡಿದ್ದರು.
ಪುತ್ರನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ದಂಪತಿ ಕೆಲ ದಿನಗಳ ಬಳಿಕ ಬಾಲನ್ಯಾಯ (ಮಕ್ಕಳ ಕಾಳಜಿ ಹಾಗೂ ರಕ್ಷಣೆ) ಕಾಯ್ದೆಯ ನಿಯಮಗಳ ಅನುಸಾರ ಮಗುವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ, ಹೆಚ್ಚಿನ ಸಂಖ್ಯೆಯ ಪೋಷಕರು ಮಕ್ಕಳನ್ನು ದತ್ತು ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದ ಕಾರಣ ಮಗು ದತ್ತು ಪಡೆಯಲು ಕನಿಷ್ಠ ಮೂರು ವರ್ಷ ತಗುಲಲಿದೆ ಎಂದು ತಿಳಿಸಲಾಗಿತ್ತು.
ವೈದ್ಯರೊಂದಿಗೆ ಸಮಾಲೋಚಿಸಿದ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದರು. ಅರ್ಜಿದಾರರ ನಾದಿನಿ ಅಂಡಾಣು ದಾನ ಮಾಡಲು ಸಮ್ಮತಿಸಿದ್ದರು. 2 ಮಕ್ಕಳ ತಾಯಿಯಾಗಿರುವ ಹತ್ತಿರದ ಕುಟುಂಬದ ಸ್ನೇಹಿತೆಯೊಬ್ಬರು (25 ವರ್ಷ) ಬಾಡಿಗೆ ತಾಯಿಯಾಗಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಪತಿಗೆ 57 ವರ್ಷವಾಗಿದ್ದ ಕಾರಣ ಹಾಗೂ ಬಾಡಿಗೆ ತಾಯಿಯಾಗುವ ಮಹಿಳೆ ದಂಪತಿಯ ಆನುವಂಶಿಕ ಸಂಬಂಧಿ ಅಲ್ಲ ಎಂಬ ಕಾರಣಕ್ಕೆ ಬಾಡಿಗೆ ತಾಯ್ತನದ ಕಾಯ್ದೆಯ ಕೆಲ ಕಲಂಗಳು ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿದ್ದವು. ಇದರಿಂದಾಗಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.