ADVERTISEMENT

ನೆಲಮಂಗಲ | ಚಿರತೆ ಸೆರೆಗೆ ‘ತುಮಕೂರು ಬೋನು‌’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:31 IST
Last Updated 19 ನವೆಂಬರ್ 2024, 16:31 IST
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಳವಡಿಸಿದ ತುಮಕೂರು ಬೋನು
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಳವಡಿಸಿದ ತುಮಕೂರು ಬೋನು   

ದಾಬಸ್ ಪೇಟೆ: ಮಹಿಳೆಯೊಬ್ಬರನ್ನು ಕೊಂದ ಚಿರತೆ ಹಿಡಿಯಲು, ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿ ಸುತ್ತಲಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಎಂಟು ಬೋನುಗಳನ್ನು ಇಟ್ಟಿದೆ.

‘ಒಂದು ಸಾರಿ ಸಣ್ಣ ಬೋನುಗಳಿಗೆ ಚಿರತೆ ಬಿದ್ದರೆ, ಮತ್ತೊಮ್ಮೆ ಬೀಳುವುದು ಕಡಿಮೆ. ಅದಕ್ಕಾಗಿ ವಿಶೇಷವಾದ ‘ತುಮಕೂರು ಬೋನು’ ತಂದು ಇಡಲಾಗಿದೆ. ಚಿರತೆ ಚಲನವಲನದ ಮೇಲೆ ನಿಗಾ ಇಡಲು ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎತ್ತರವಾಗಿ ಹಾಗೂ ವಿಶಾಲವಾಗಿರುವ ಈ ಬೋನನ್ನು ತುಮಕೂರು ಭಾಗದಲ್ಲಿ ಚಿರತೆ ಹಿಡಿಯಲು ಬಳಸುತ್ತಿದ್ದರಿಂದ, ಅದಕ್ಕೆ ತುಮಕೂರು ಬೋನು ಎಂದು ಹೆಸರು.

ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಅಮೃತ್ ಆತ್ರೆಶ್ ಅವರು ಮಂಗಳವಾರ ಚಿರತೆ ಓಡಾಡುವ ಸಿಗೆಪಾಳ್ಯ, ಹುರಿಯಪ್ಪನ ಪಾಳ್ಯ, ಕಂಬಾಳು ಗೊಲ್ಲರ ಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ನಂತರ ಚಿರತೆ ದಾಳಿಗೆ ಬಲಿಯಾದ ಕರಿಯಮ್ಮ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ADVERTISEMENT

ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಮುದ್ದೀರೇಶ್ವರ ದೇವಾಲಯದ ಸುತ್ತಮುತ್ತ ಚಿರತೆ ಸುಳಿದಾಡುವುದನ್ನು ಜನರು ನೋಡಿದ್ದು, ಚಿರತೆ ಸಿಗುವವರೆಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುದ್ದೀರೇಶ್ವರ ಜಾತ್ರೆ ನಡೆಸದಂತೆ ತಹಶೀಲ್ದಾರ್ ಹೇಳಿದರು.

ಭಾನುವಾರ ಸಂಜೆ ಹುಲ್ಲುಕೊಯ್ಯಲು ಹೋಗಿದ್ದ ಕಂಬಾಳುಗೊಲ್ಲರಹಟ್ಟಿಯ ಕರಿಯಮ್ಮ ಎಂಬುವವರ ಮೇಲೆ ಚಿರತೆ ಕೊಂದು ತಿಂದಿತ್ತು. ಅರಣ್ಯ ಇಲಾಖೆಯವರು ಸೋಮವಾರದಿಂದ ಈ ಭಾಗದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.