ADVERTISEMENT

ತುರಹಳ್ಳಿ ‘ಮರಗಳ ಉದ್ಯಾನ’ಕ್ಕೆ ಮರುಜೀವ

ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿರುವ ಟ್ರೀ–ಪಾರ್ಕ್‌ l ಪುನರುಜ್ಜೀವನಕ್ಕೆ ಮುಂದಾದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:17 IST
Last Updated 13 ಮೇ 2019, 20:17 IST
ತುರಹಳ್ಳಿ ಕಾಡು
ತುರಹಳ್ಳಿ ಕಾಡು   

ಬೆಂಗಳೂರು: ತುರಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ (ಶೋಭಾ ವ್ಯೂವ್‌ ಬಳಿ) ಈ ಹಿಂದೆ ಅಭಿವೃದ್ಧಿಪಡಿಸಿದ್ದ ‘ಮರಗಳ ಉದ್ಯಾನ’ದ ಮೂಲಸೌಕರ್ಯ ಶಿಥಿಲಾವಸ್ಥೆ ತಲುಪಿದ್ದು, ಅದನ್ನು ಪುನರುಜ್ಜೀವನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕಗ್ಗಲೀಪುರ ವಲಯ ವ್ಯಾಪ್ತಿಯಲ್ಲಿರುವ ತುರಹಳ್ಳಿ ಕಿರು ಅರಣ್ಯದ ಸುಮಾರು 40 ಎಕರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬನಶಂಕರಿ 6ನೇ ಹಂತದ ಬಡಾವಣೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಒತ್ತುವರಿ ಮಾಡಿಕೊಂಡಿತ್ತು. ಅದನ್ನು ಬಿಡಿಸಿಕೊಂಡಿದ್ದ ಅರಣ್ಯ ಇಲಾಖೆ ಅಲ್ಲಿ ಮರಗಳ ಉದ್ಯಾನ ನಿರ್ಮಿಸಿತ್ತು. ಮೂಲಸೌಕರ್ಯ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಈ ಉದ್ಯಾನವು ಸೊರಗಿತ್ತು. ಈಗ ಅದನ್ನು ಮತ್ತೆ ಅಭಿವೃದ್ಧಿಪಡಿಸುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

‘ನಗರದ ಸೆರಗಿನಲ್ಲೇ ಇರುವ ತುರಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಜನ ಭೇಟಿ ನೀಡುವುದು ಹೆಚ್ಚುತ್ತಿದೆ. ಸುಮಾರು 590 ಎಕರೆಗಳಷ್ಟು ವಿಶಾಲವಾಗಿರುವ ನೈಸರ್ಗಿಕ ಕಾಡಿನಲ್ಲಿ ಮಾನವ ಚಟುವಟಿಕೆಗೆ ಅವಕಾಶ ಕೊಡುವುದು ಸೂಕ್ತ ಅಲ್ಲ. ಈ ಸಲುವಾಗಿ ಕಾಡಿನ ಅಂಚಿನಲ್ಲಿರುವ ಮರ ಉದ್ಯಾನವನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್‌ ತಿಳಿಸಿದರು.

ADVERTISEMENT

‘ಇಲ್ಲಿ ಈಗಾಗಲೇ ಮರಗಳನ್ನು ಬೆಳೆಸಿದ್ದೇವೆ. ಖಾಲಿ ಇರುವ ಜಾಗದಲ್ಲಿ ಇನ್ನಷ್ಟು ಮರಗಳನ್ನು ಬೆಳೆಸುತ್ತೇವೆ. ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯ ಕಲ್ಪಿಸಲಿದ್ದೇವೆ. ವಿಹಾರ ಪಥವನ್ನೂ ನಿರ್ಮಿಸುತ್ತೇವೆ. ಇದಕ್ಕೆ ನೈಸರ್ಗಿಕ ಪರಿಕರಗಳನ್ನು ಬಳಸುತ್ತೇವೆ’ ಎಂದು ಅವರು ವಿವರಿಸಿದರು.

‘ತುರಹಳ್ಳಿ ಕಾಡಿನಲ್ಲಿ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ ಮಳೆನೀರು ಇಂಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಮಿತಿಮೀರಿದ ಕಾಂಕ್ರಿಟೀಕರಣದಿಂದಾಗಿ ನಗರದಲ್ಲಿ ಮಳೆ ನೀರು ಭೂಮಿಗೆ ಇಂಗುವ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತುರಹಳ್ಳಿ ಪ್ರದೇಶದಲ್ಲಿ ಸುಮಾರು 1000 ಎಕರೆಗೂ ಜಾಸ್ತಿ ಕಾಡು ಇದೆ. ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಮಳೆ ನೀರು ಇಂಗಿಸಲು ವ್ಯವಸ್ಥೆ ಮಾಡಬೇಕು. ಇದರಿಂದ ನೀರು ಪೋಲಾಗುವುದನ್ನು ತಪ್ಪಿಸಬಹುದು’ ಎಂದು ಬನಶಂಕರಿ ಆರನೇ ಹಂತದ ಎರಡನೇ ಬ್ಲಾಕ್‌ ಹಾಗೂ ಕರಿಯನಪಾಳ್ಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ಸಲಹೆ ನೀಡಿದರು.

‘ಮಳೆ ನೀರು ಇಂಗಿಸಲು ತುರಹಳ್ಳಿ ಕಾಡನ್ನು ಬಳಸಿಕೊಳ್ಳುವ ಚಿಂತನೆ ಇದೆ. ಇದಕ್ಕೆ ಕಾರ್ಯಯೋಜನೆ ಹಾಕಿಕೊಂಡಿದ್ದೇವೆ’ ಎಂದು ಅರಣ್ಯ ಅಧಿಕಾರಿ ಪ್ರಾಣೇಶ ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈಕ್ಲಿಂಗ್‌ಗೆ ಅವಕಾಶ ಇಲ್ಲ’: ‘ಕಿರು ಅರಣ್ಯದೊಳಗೆ ಸೈಕ್ಲಿಂಗ್‌, ರಾಕ್‌ ಕ್ಲೈಂಬಿಂಗ್‌ ಹಾಗೂ ಚಾರಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸೈಕ್ಲಿಂಗ್‌ ಪಟುಗಳು ಹಾಗೂ ಚಾರಣಿಗರು ಒತ್ತಾಯಿಸಿದ್ದರು. ಆದರೆ, ಈ ಪ್ರಸ್ತಾವಕ್ಕೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನಗರದ ಅಂಚಿನಲ್ಲಿ ಉಳಿದುಕೊಂಡಿರುವ ಈ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಈಗಾಗಲೇ ನಗರೀಕಣದಿಂದಾಗಿ ಇಲ್ಲಿನ ವನ್ಯಜೀವಿಗಳು ಅಪಾಯಕ್ಕೆ ಸಿಲುಕಿವೆ. ಹಾಗಾಗಿ ಕಾಡಿನ ಒಳಗೆ ಮಾನವ ಚಟುವಟಿಕೆಯನ್ನು ನಿರ್ಬಂಧಿಸಬೇಕು’ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

‘ಸಭೆಯಲ್ಲಿ ಭಾಗವಹಿಸಿದವರು ಬೇರೆ ಬೇರೆ ರೀತಿಯ ಅಭಿಪ್ರಾಯ ನೀಡಿದ್ದಾರೆ. ಇಲ್ಲಿನ ವನ್ಯಜೀವಿಗ
ಳನ್ನು ಉಳಿಸುವ ಮಹತ್ವದ ಬಗ್ಗೆ ನಾವು ಅವರಿಗೆ ತಿಳಿ ಹೇಳಿದ್ದೇವೆ. ಕಿರು ಅರಣ್ಯದ ಸುತ್ತ ಬೇಲಿ ನಿರ್ಮಿಸಿ ಜನ ಅದರೊಳಗೆ ಪ್ರವೇಶಿಸುವುದನ್ನು ಆದಷ್ಟು ನಿರ್ಬಂಧಿಸಿದ್ದೇವೆ. ಮರಗಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಅಲ್ಲಿಗೆ ಜನರು ಬೇಟಿ ನೀಡಲು ಅವಕಾಶ ಕಲ್ಪಿಸುತ್ತೇವೆ. ಆದರೆ, ಕಾಡಿನೊಳಗೆ ಸೈಕ್ಲಿಂಗ್‌, ಚಾರಣ ಹಾಗೂ ರಾಕ್‌–ಕ್ಲೈಂಬಿಂಗ್‌ಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಪ್ರಾಣೇಶ ದೇಶಪಾಂಡೆ ಸ್ಪಷ್ಟಪಡಿಸಿದರು.

‘ಸೈಕ್ಲಿಂಗ್‌ಗೆ ಅವಕಾಶ ಇಲ್ಲ’

‘ಕಿರು ಅರಣ್ಯದೊಳಗೆ ಸೈಕ್ಲಿಂಗ್‌, ರಾಕ್‌ ಕ್ಲೈಂಬಿಂಗ್‌ ಹಾಗೂ ಚಾರಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸೈಕ್ಲಿಂಗ್‌ ಪಟುಗಳು ಹಾಗೂ ಚಾರಣಿಗರು ಒತ್ತಾಯಿಸಿದ್ದರು. ಆದರೆ, ಈ ಪ್ರಸ್ತಾವಕ್ಕೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನಗರದ ಅಂಚಿನಲ್ಲಿ ಉಳಿದುಕೊಂಡಿರುವ ಈ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಈಗಾಗಲೇ ನಗರೀಕಣದಿಂದಾಗಿ ಇಲ್ಲಿನ ವನ್ಯಜೀವಿಗಳು ಅಪಾಯಕ್ಕೆ ಸಿಲುಕಿವೆ. ಹಾಗಾಗಿ ಕಾಡಿನ ಒಳಗೆ ಮಾನವ ಚಟುವಟಿಕೆಯನ್ನು ನಿರ್ಬಂಧಿಸಬೇಕು’ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

‘ಸಭೆಯಲ್ಲಿ ಭಾಗವಹಿಸಿದವರು ಬೇರೆ ಬೇರೆ ರೀತಿಯ ಅಭಿಪ್ರಾಯ ನೀಡಿದ್ದಾರೆ. ಇಲ್ಲಿನ ವನ್ಯಜೀವಿಗಳನ್ನು ಉಳಿಸುವ ಮಹತ್ವದ ಬಗ್ಗೆ ನಾವು ಅವರಿಗೆ ತಿಳಿ ಹೇಳಿದ್ದೇವೆ. ಕಿರು ಅರಣ್ಯದ ಸುತ್ತ ಬೇಲಿ ನಿರ್ಮಿಸಿ ಜನ ಅದರೊಳಗೆ ಪ್ರವೇಶಿಸುವುದನ್ನು ಆದಷ್ಟು ನಿರ್ಬಂಧಿಸಿದ್ದೇವೆ. ಮರಗಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಅಲ್ಲಿಗೆ ಜನರು ಬೇಟಿ ನೀಡಲು ಅವಕಾಶ ಕಲ್ಪಿಸುತ್ತೇವೆ. ಆದರೆ, ಕಾಡಿನೊಳಗೆ ಸೈಕ್ಲಿಂಗ್‌, ಚಾರಣ ಹಾಗೂ ರಾಕ್‌–ಕ್ಲೈಂಬಿಂಗ್‌ಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಪ್ರಾಣೇಶ ದೇಶಪಾಂಡೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.