ADVERTISEMENT

ಸೃಜನಾತ್ಮಕ ನಿರ್ಧಾರದಿಂದ ವ್ಯವಸ್ಥೆ ಸುಧಾರಣೆ: ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ನೂತನ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 6 ಮೇ 2022, 11:18 IST
Last Updated 6 ಮೇ 2022, 11:18 IST
ಬಿಬಿಎಂಪಿಯ ನೂತನ ಮುಖ್ತ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಗೌರವ ಗುಪ್ತ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು
ಬಿಬಿಎಂಪಿಯ ನೂತನ ಮುಖ್ತ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಗೌರವ ಗುಪ್ತ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು   

ಬೆಂಗಳೂರು: ‘ಬಿಬಿಎಂಪಿಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎನ್ನುವ ನಿರಾಶೆಯ ಭಾವನೆ ಬೇಡ. ಸೃಜನಾತ್ಮಕ ನಿರ್ಧಾರಗಳಿಂದ ವ್ಯವಸ್ಥೆಯನ್ನು ಸರಿಪಡಿಸಬಹುದು’ ಎಂದು ಬಿಬಿಎಂಪಿಯ ನೂತನ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ಆಶಾವಾದ ವ್ಯಕ್ತಪಡಿಸಿದರು.

ಗೌರವ್ ಗುಪ್ತ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಶಕ್ತಿ ಮೀರಿ, ಅಪೇಕ್ಷೆಗೆ ಮೀರಿ ದೊಡ್ಡ ಹುದ್ದೆ ಸಿಕ್ಕಿದೆ ಎಂದು ನಾನು ಭಾವಿಸಿಲ್ಲ. ಜನರ ಜೊತೆ ಸೇವೆ ಮಾಡುವುದಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು..

ADVERTISEMENT

‘ಪ್ರತಿಯೊಂದು ನಿರ್ಧಾರವೂ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಕೆಲಸದಲ್ಲೂ ಪಾರದರ್ಶಕತೆ ಕಾಯ್ದುಕೊಂಡರೆ ಯಶಸ್ವಿಯಾಗಿ ಆಡಳಿತ ನೀಡುವುದು ಕಷ್ಟವಲ್ಲ. ಇಲ್ಲಿ ನಾವು ನೇರವಾಗಿ ಜನರ ಜೊತೆ ನೇರ ಒಡನಾಟ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲಿ ಯಶಸ್ವಿಯಾದರೂ, ವಿಫಲವಾದರೂ ಎದ್ದು ಕಾಣುತ್ತದೆ. ಹಳೆಯ ಹುದ್ದೆಯನ್ನು ಉತ್ಸಾಹದಿಂದಲೇ ನಿರ್ವಹಿಸಿದ್ದೆ. ಹೊಸ ಹುದ್ದೆಯಲ್ಲೂ ಅಷ್ಟೇ ಉತ್ಸಾಹದಿಂದಲೇ ಕಾರ್ಯ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

‘ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ರಸ್ತೆ ಗುಂಡಿ ಸಮಸ್ಯೆ ನೀಗಿಸುವುದು ಹಾಗೂ ಕಸ ವಿಲೇವಾರಿ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ಹಾಗೂ ಮಳೆಗಾಲದಲ್ಲಿ ಪ್ರವಾಹದಿಂದ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಕೋವಿಡ್‌ ನಾಲ್ಕನೇ ಅಲೆ ನಿಭಾಯಿಸುವುದು ನನ್ನ ಸದ್ಯದ ಆದ್ಯತೆ’ ಎಂದರು.

‘ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿ ಅದರದ್ದೇ ಆದ ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸಲು ಬಿಬಿಎಂಪಿ ಆಡಳಿತ ಯಂತ್ರವು ಸಮರ್ಥವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದು ಕಠಿಣ ನಿಜ, ಆದರೆ, ಅದಕ್ಕೆ ಹೆದರುವುದಿಲ್ಲ. ನನ್ನ ಕಾರ್ಯಕ್ಷಮತೆ ಹಾಗೂ ಶಕ್ತಿಗೂ ಇದು ಸವಾಲು. ಬಿಬಿಎಂಪಿ ಅನುಭವಿ ಅಧಿಕಾರಿಗಳಿದ್ದಾರೆ. ಅವರ ನೆರವು ಪಡೆದು ಸನ್ನಿವೇಶಗಳಿಗೆ ತಕ್ಕಂತೆ ಸಮರ್ಪಕ ನಿರ್ಧಾರ ತಳೆಯುವ ಮೂಲಕ ಈ ಹುದ್ದೆಯನ್ನು ಜನರ ನಿರೀಕ್ಷೆಗೆ ತಕ್ಕಂತೆ ನಿರ್ವಹಿಸುವ ವಿಶ್ವಾಸ ಇದೆ’ ಎಂದರು.

‘ರಾಜ್ಯದಲ್ಲಿ29 ವರ್ಷ ಕರ್ತವ್ಯ ನಿರ್ವಹಿಸಿದ ಅನುಭವ ಇದೆ. ಪ್ರತಿ ಹುದ್ದೆಗೆ ತನ್ನದೇ ಆದ ಸವಾಲು ಇರುತ್ತದೆ. ಅದಕ್ಕೆ ಹೆದರುವುದಿಲ್ಲ. ಸ್ಥಳೀಯ ಸರ್ಕಾರದಲ್ಲಿ ಜನರರಿಗೆ ಇನ್ನೂ ಹತ್ತಿರವಾಗಬೇಕಾಗುತ್ತದೆ. ಇಲ್ಲಿ ಸ್ವಾಯತತ್ತೆ ಜೊತೆ ಜವಾಬ್ದಾರಿಯೂ ಹೆಚ್ಚು ಇದೆ. ನಾವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವುದರ ಆಧಾರದಲ್ಲಿ ಜನರು ನಮ್ಮೊಂದಿಗೆ ಕೈಜೋಡಿಸುತ್ತಾರೆ. ಒಂದೇ ದಿನದಲ್ಲಿ ಸಮಗ್ರ ಬದಲಾವಣೆ ತರುತ್ತೇನೆ ಎನ್ನಲಾಗದು. ಕಾರ್ಯಕ್ಷಮತೆ ಹಾಗೂ ಶಕ್ತಿ ಮೀರಿ ಕಾರ್ಯನಿರ್ವಹಿಸಬೇಕು’ ಎಂದರು.

‘ರಸ್ತೆಯಲ್ಲಿ ಸಣ್ಣ ಗುಂಡಿ ನಿರ್ಮಾಣವಾದಾಗಲೇ ಅದನ್ನು ಮುಚ್ಚಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗುಂಡಿಯ ಬದಲು ಹಳ್ಳವನ್ನು ಮುಚ್ಚಬೇಕಾಗುತ್ತದೆ. ಇದು ಪ್ರತಿ ವರ್ಷದ ಸಮಸ್ಯೆ. ಜನರು ಗುಂಡಿ ಮುಕ್ತ ರಸ್ತೆಯನ್ನು ಬಯಸುತ್ತಾರೆ. ಅವರ ಅಪೇಕ್ಷೆ ಈಡೇರಿಸಲು ಸಕಲ ಪ್ರಯತ್ನ ಮಾಡುತ್ತೇವೆ’ ಎಂದರು.

‘ಇಲಾಖೆಗಳ ನಡುವೆ ಸಮನ್ವಯ ಪ್ರಮುಖ ವಿಚಾರ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಲಮಂಡಳಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ. ಜಲಮಂಡಳಿಯವರು ಕೊಳವೆ ಅಳವಡಿಸುವಾಗ ಪಡುವ ಕಷ್ಟ ಹಾಗೂ ಅದಕ್ಕಾಗಿ ರಸ್ತೆ ಅಗೆದ ಬಳಿಕ ಬಿಬಿಎಂಪಿಯವರು ಪಡುವ ಕಷ್ಟಗಳೆರಡೂ ಗೊತ್ತಿದೆ. ಉತ್ತಮ ಸಮನ್ವಯ ಉಳಿಸಿಕೊಂಡು ಕೆಲಸ ಮಾಡುವುದು ನನ್ನ ಉದ್ದೇಶ’ ಎಂದರು.

‘ ಜನರ ಕಷ್ಟ ಅರಿತು ಅವರ ಜೊತೆ ಕೆಲಸಮಾಡಬೇಕು. ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಸುಧಾರಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಜನರ ದೂರುಗಳನ್ನು ತಕ್ಷಣ ಇತ್ಯರ್ಥಪಡಿಸುವ ಮೂಲಕ ದೂರು ಕಡಿಮೆ ಆಗುವಂತೆ ನೋಡಿಕೊಳ್ಳಬೇಕು. ಸಹಾಯವಾಣಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಜೊತೆಗೆ ಮೂಲಸೌಕರ್ಯ ಸುಧಾರಣೆಯೂ ಆಗಬೇಕಿದೆ.ಎಲ್ಲರೂ ಸೇರಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸಿದರೆ ಎಲ್ಲರಿಗೂ ಯಶಸ್ಸು ಸಿಗುತ್ತದೆ. ಹಾಗೆಯೇ ವೈಫಲ್ಯಕ್ಕೂ ಎಲ್ಲರ ಕೊಡುಗೆ ಇದೆ. ಬಿಬಿಎಂಪಿ ಬಳಿ ಸಾಕಷ್ಟು ಮಾನವ ಸಂಪನ್ಮೂಲ ಇದೆ. ಅದನ್ನು ಸರಿಯಾಗಿ ಬಳಸಿದರೆ ಜನರ ನಿರೀಕ್ಷೆಗೆ ತಕ್ಕ ಸೇವೆ ನೀಡಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಧಾರಣೆ ನಿರಂತರ ಪ್ರಕ್ರಿಯೆ: ಗೌರವ್‌ ಗುಪ್ತ

‘ಬಿಬಿಎಂಪಿಯಲ್ಲಿ ಸುಧಾರಣೆ ನಿರಂತರ ಪ್ರಕ್ರಿಯೆ. ಇಲ್ಲಿನ ರಾಜಕಾಲುವೆ, ರಸ್ತೆಗಳು, ಕತ್ತರಿಸಿದ ರಸ್ತೆಗಳ ದುರಸ್ತಿ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಸ್ಮಾರ್ಟ್ ಸಿಟಿ ರಸ್ತೆಗಳ ಕಾಮಗಾರಿಯೂ ಬಹುತೇಕ ಕಡೆ ಪೂರ್ಣಗೊಂಡಿದೆ. ಬೇಸಿಗೆಯಲ್ಲಿ ಹನಿ ಮಳೆ ಆಗುವುದೇ ಕಡಿಮೆ. ಆದರೆ ಈಗ ಮಳೆಗಾಲಕ್ಕಿಂತ ಜಾಸ್ತಿ ಮಳೆ ಆಗಿದೆ. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಿದ್ದೇವೆ. 80 ಮಿ.ಮೀ ಮಳೆ ಆದರೂ ಜನರಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ಅನನುಕೂಲ ಆಗಿದೆ. ಬಿಬಿಎಂಪಿಯಲ್ಲಿ ಇನ್ನಷ್ಟು ಸುಧಾರಣೆಗಣ್ನು ಜಾರಿಗೊಳಿಸುವ ಅಗತ್ಯ ಇದೆ. ಹೊಸ ಮುಖ್ಯ ಆಯುಕ್ತರು ಅನುಭವಸ್ಥರಿದ್ದಾರೆ. ಅವರು ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.