ಬೆಂಗಳೂರು: ಮನೆ, ಪೇಯಿಂಗ್ ಗೆಸ್ಟ್ ಕಟ್ಟಡಗಳು, ಗ್ಯಾರೇಜ್, ಅಂಗಡಿ ಹಾಗೂ ಇತರೆಡೆ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹ 6 ಲಕ್ಷ ಮೌಲ್ಯದ 45 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸೇವನೆಗಾಗಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಬಿಹಾರದ ಅಬ್ದುಲ್ ರಜಾಕ್‌ನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿ, ₹ 4.50 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಕಾಡುಗೋಡಿಯಲ್ಲಿ ವಾಸವಾಗಿರುವ ಈತ, ಬೆಳಗಿನ ಜಾವ ಹೆಚ್ಚು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳಿಂದ ನಗರದ ಪೇಯಿಂಗ್ ಗೆಸ್ಟ್, ಕಾರು ಪಾರ್ಕಿಂಗ್, ಕಟ್ಟಡ ನಿರ್ಮಾಣ ಸ್ಥಳ ಹಾಗೂ ಇತರೆಡೆ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಗಾಂಜಾ ಖರೀದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರು ನಾಪತ್ತೆ: ಮತ್ತೊಂದು ಪ್ರಕರಣದಲ್ಲಿ ಡೆಲಿವರಿ ಬಾಯ್ ಒಬ್ಬರಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಆರೋಪಿ ಅಜಯ್ ಎಂಬಾತನನ್ನು ಮಹದೇವಪುರ ಪೊಲೀಸರು ಬಂಧಿಸಿ ₹1.50 ಲಕ್ಷ ಮೌಲ್ಯದ 13 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಠಾಣಾ ವ್ಯಾಪ್ತಿಯ ಬಿ.ನಾರಾಯಣಪುರದಲ್ಲಿ ಡೆಲಿವರಿ ಬಾಯ್ ಒಬ್ಬರಿಗೆ ಮೂವರು ಚಾಕು ತೋರಿಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಖಚಿತ ಮಾಹಿತಿ ಆಧರಿಸಿ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರನ್ನು ಪೊಲೀಸರು ತಡೆದರು. ಪೊಲೀಸರನ್ನು ನೋಡುತ್ತಿದ್ದಂತೆ ಇಬ್ಬರು ಪರಾರಿಯಾದರು. ಅಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.