ADVERTISEMENT

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಎರಡು ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:07 IST
Last Updated 24 ಅಕ್ಟೋಬರ್ 2024, 16:07 IST
ನಂಜಪ್ಪ ಗಾರ್ಡನ್‌ನಲ್ಲಿ ತೆರವಾಗುತ್ತಿರುವ ಕಟ್ಟಡ
ನಂಜಪ್ಪ ಗಾರ್ಡನ್‌ನಲ್ಲಿ ತೆರವಾಗುತ್ತಿರುವ ಕಟ್ಟಡ   

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ಶಿಥಿಲಾವಸ್ಥೆಯ ಕಟ್ಟಡ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ.

ಹೊರಮಾವು ವ್ಯಾಪ್ತಿಯ ನಂಜಪ್ಪ ಗಾರ್ಡನ್ 4ನೇ ಅಡ್ಡರಸ್ತೆಯಲ್ಲಿ ಸರ್ವೆ ನಂಬರ್‌ 54/1ರಲ್ಲಿ ಪುಟ್ಟಪ್ಪ ಎಂಬ ಮಾಲೀಕರು 10x25 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುತ್ತಿರುವ ನೆಲಮಹಡಿ ಹಾಗೂ ಐದು ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದೆ. ಈ ಕಟ್ಟಡವನ್ನು ತೆರವು ಮಾಡಲು ಆದೇಶಿಸಲಾಗಿದೆ. ಮಾಲೀಕರು ಒಪ್ಪಿ, ತೆರವು ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಶಿಥಿಲ ಕಟ್ಟಡ: ಎಚ್ಎಎಲ್ ವಾರ್ಡ್ ಇಸ್ಲಾಂಪುರದಲ್ಲಿ ಶ್ರೀರಾಂ ಎಂಬ ಮಾಲೀಕರ ಎರಡು ಅಂತಸ್ತಿನ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

ADVERTISEMENT

ಸಹಾಯಕ ಎಂಜಿನಿಯರ್‌ ಅಮಾನತು

ಬಾಬು ಸಾ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಎಂಜಿನಿಯರ್‌ ರಮೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ. ಹೊರಮಾವು ಉಪ ವಿಭಾಗ ವ್ಯಾಪ್ತಿಯ ಬಾಬು ಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನ 7ನೇ ಬಿ ಅಡ್ಡರಸ್ತೆಯಲ್ಲಿ ನಿವೇಶನ ಸಂಖ್ಯೆ 24ರಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಬಿಬಿಎಂಪಿ –2020 ಕಾಯ್ದೆ ಪ್ರಕಾರ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಸ್ಥಿರೀಕರಣದ ಆದೇಶವನ್ನು ಸೆಪ್ಟೆಂಬರ್‌ 21ರಂದು ಹೊರಡಿಸಲಾಗಿತ್ತು. ಈ ಆದೇಶದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕರ್ತವ್ಯ ಲೋಪ ಎಸಗಿದ ಆರೋಪದಡಿ ರಮೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಗುರುವಾರ ಆದೇಶ ಹೊರಡಿಸಿದ್ದಾರೆ.

ಎಚ್ಎಎಲ್ ವಾರ್ಡ್ ಇಸ್ಲಾಂಪುರದಲ್ಲಿ ಕಟ್ಟಡ ತೆರವು ಮಾಡಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.