ಬೆಂಗಳೂರು: ನಗರದ ದಕ್ಷಿಣ ಭಾಗದ ವಾಹನ ಸಂಚಾರ ಸುಗಮಗೊಳಿಸಲು ಎರಡು ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಬಿಬಿಎಂಪಿ ಮುಂದಾಗಿದೆ.
ಕೃಷ್ಣರಾವ್ ಪಾರ್ಕ್‌ನಿಂದ ಕನಕಪುರ ರಸ್ತೆವರೆಗೆ ಇಂಟಿಗ್ರೇಟೆಡ್ ಮೇಲ್ಸೇತುವೆ, ಬನಶಂಕರಿ ಮಾರುಕಟ್ಟೆಯಿಂದ ಸಾರಕ್ಕಿ ಜಂಕ್ಷನ್‌ವರೆಗೆ ಅಂಡರ್‌ಪಾಸ್ ನಿರ್ಮಿಸುವ ಯೋಜನೆಗೆ ಚಾಲನೆ ದೊರೆತಿದೆ. ಇದಲ್ಲದೆ, ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗಿನ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೂ ಮುಂದಾಗಿದೆ.
ಬನಶಂಕರಿ ಜಂಕ್ಷನ್‌ನಲ್ಲಿ ಈಗ ಹೆಚ್ಚಿನ ಸಂಚಾರ ದಟ್ಟಣೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಇದೂ ಸೇರಿದಂತೆ ಐದಾರು ಜಂಕ್ಷನ್‌ಗಳಲ್ಲಿ ಸಿಗ್ನಲ್ ರಹಿತ ಸಂಚಾರಕ್ಕೆ ಅನುವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಘುನಾಥ ನಾಯ್ಡು, ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.
ಈ ಮನವಿ ಮೇರೆಗೆ ಬನಶಂಕರಿ ಮೇಲ್ಸೇತುವೆ ನಿರ್ಮಾಣದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 18ರಂದು ಸ್ಥಳ ಪರಿಶೀಲನೆ ನಡೆಸಿದ್ದರು. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಂತೆ ಸೆ.25ರಂದು ಯೋಜನೆಯ ಡಿಪಿಆರ್‌ಗೆ ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ. ಅ.3ರೊಳಗೆ ಟೆಂಡರ್ ಸಲ್ಲಿಸಲು ಅವಕಾಶವಿದ್ದು, ಅ.9ರಂದು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಇದಾದ 30 ದಿನಗಳಲ್ಲಿ ಡಿಪಿಆರ್ ಸಲ್ಲಿಸಲು ಅವಕಾಶವಿದೆ.
ಕೃಷ್ಣರಾವ್ ಪಾರ್ಕ್, ಟಾಟಾ ಸಿಲ್ಕ್ ಫಾರ್ಮ್ ಜಂಕ್ಷನ್, ಯಡಿಯೂರು ಜಂಕ್ಷನ್, ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್, ಜೆಎಸ್‌ಎಸ್ ಕಾಲೇಜು ಜಂಕ್ಷನ್, ಹುಣಸೆಮರ ಜಂಕ್ಷನ್, ಬನಶಂಕರಿ ದೇವಸ್ಥಾನ, ಕನಕಪುರ ರಸ್ತೆವರೆಗೆ ಇಂಟಿಗ್ರೇಟೆಡ್ ಮೇಲ್ಸೇತುವೆ ನಿರ್ಮಿಸುವ ಯೋಜನೆ ಇದೆ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದರು.
ಜೆ.ಸಿ. ರಸ್ತೆ ‘ಎಲಿವೇಟೆಡ್ ಕಾರಿಡಾರ್’ಗೆ ಅಸ್ತು!
ಬಿಜೆಪಿ ಸರ್ಕಾರದಲ್ಲಿ ಅಮೃತ ನಗರೋತ್ಥಾನ ಅನುದಾನದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದ ಜೆ.ಸಿ. ರಸ್ತೆ ‘ಎಲಿವೇಟೆಡ್ ಕಾರಿಡಾರ್’ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.6ರಂದು ಅನುಮೋದನೆ ನೀಡಿದ್ದಾರೆ. ಕೂಡಲೇ ಟೆಂಡರ್ ಕರೆದು, ಯೋಜನೆ ಅನುಷ್ಠಾನಕ್ಕೆ ಸೂಚಿಸಿದ್ದಾರೆ.
‘ಈ ಹಿಂದೆ ಸ್ಟೀಲ್ ಮೇಲ್ಸೇತುವೆಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಹಿಂದೆ ತಯಾರಿಸಲಾಗಿದ್ದ ಡಿಪಿಆರ್‌ನಲ್ಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಲ್ಲಿ ‘ಎಲಿವೇಟೆಡ್ ಕಾರಿಡಾರ್’ಗೆ ₹213 ಕೋಟಿ ಅನುದಾನ ನೀಡಲಾಗಿದೆ’ ಎಂದು ಯೋಜನೆ ವಿಭಾಗದ ಎಂಜಿನಿಯರ್ ತಿಳಿಸಿದರು.
ಮಿನರ್ವ ವೃತ್ತದಿಂದ ಜೆ.ಸಿ. ರಸ್ತೆ ಮಾರ್ಗವಾಗಿ ಹಡ್ಸನ್ ವೃತ್ತದವರೆಗೆ ‘ಎಲಿವೇಟೆಡ್ ಕಾರಿಡಾರ್’ ನಿರ್ಮಾಣವಾಗಲಿದೆ. ದ್ವಿಮುಖ ನಾಲ್ಕು ಪಥದ ಮೇಲ್ಸೇತುವೆ ಇದಾಗಿದೆ. ಮಿನರ್ವ ವೃತ್ತ, ಭಾರತ್ ಟಾಕೀಸ್, ಶಿವಾಜಿ ಟಾಕೀಸ್, ಟೌನ್‌ಹಾಲ್, ಎಲ್‌ಐಸಿ ಕೇಂದ್ರ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ ಜಂಕ್ಷನ್ ಹಾಗೂ ಹಡ್ಸನ್ ವೃತ್ತಗಳು ಸಿಗ್ನಲ್ ಮುಕ್ತವಾಗಲಿವೆ. ವಿ.ವಿ ಪುರ ಹಾಗೂ ಆರ್.ವಿ ರಸ್ತೆಯಿಂದ ಮೇಲೇರಿ, ಕೆ.ಜಿ. ರಸ್ತೆ, ಕಸ್ತೂರಬಾ ರಸ್ತೆಗೆ ಇಳಿಯಬಹುದು. ನೃಪತುಂಗ ರಸ್ತೆಯಲ್ಲಿ ಮೇಲೇರಿ ಆರ್.ವಿ. ರಸ್ತೆಯಲ್ಲಿ ಇಳಿಯಬಹುದು. ಕಳೆದ ವರ್ಷ ಜುಲೈನಲ್ಲೇ ಈ ಯೋಜನೆ ಆರಂಭವಾಗಬೇಕಿತ್ತು.
ಜೆ.ಸಿ. ರಸ್ತೆ ಮೇಲ್ಸೇತುವೆ ಕಾಮಗಾರಿ 2009ರಲ್ಲಿಯೇ ಆರಂಭವಾಗಬೇಕಿತ್ತು. ಆಗ ಯೋಜನೆ ಮೊತ್ತ ₹86 ಕೋಟಿಯಾಗಿತ್ತು. 2013–14ರಲ್ಲಿ ರಾಜ್ಯ ಸರ್ಕಾರ ಯೋಜನೆಗೆ ಸಮ್ಮತಿ ಸೂಚಿಸಿತ್ತು. 2016ರ ನಗರೋತ್ಥಾನ ಯೋಜನೆಯಲ್ಲಿ ಸ್ಟೀಲ್ ಮೇಲ್ಸೇತುವೆಗೆ ₹135 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಲಾಗಿತ್ತು. ಇದೀಗ, ‘ಎಲಿವೇಟೆಡ್ ಕಾರಿಡಾರ್’ಗೆ ವೆಚ್ಚ ದುಪ್ಪಟ್ಟಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.