ಯಲಹಂಕ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಫ್ರ್ಯಾಂಚೈಸಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ (ಸಿಎಸ್‌ಆರ್) ಇಂಡಿಯಾ ಕೇರ್ಸ್ ಫೌಂಡೇಶನ್ ಹಾಗೂ ಫ್ರೆಂಡ್ಸ್ ಆಫ್ ಲೇಕ್ ಸಂಸ್ಥೆಯ ಸಹಯೋಗದಲ್ಲಿ ಪುನಶ್ಚೇತನಗೊಳಿಸಿರುವ ಇಟಗಲ್‌ಪುರ ಮತ್ತು ಸಾದೇನಹಳ್ಳಿ ಕೆರೆಗಳನ್ನು ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತು.
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ‘ಆರ್‌ಸಿಬಿ ಸಂಸ್ಥೆಯವರು ₹1.10 ಕೋಟಿ ವೆಚ್ಛದಲ್ಲಿ ಇಟಗಲ್‌ಪುರ ಮತ್ತು ಸಾದೇನಹಳ್ಳಿ ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಕೆರೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಮೇಲಿದೆ‘ ಎಂದರು.
ಇಟಗಲ್‌ಪುರ ಗ್ರಾಮದ ಮುಖಂಡ ಎಂ.ಮೋಹನ್‌ಕುಮಾರ್ ಮಾತನಾಡಿ, ‘ಕೆರೆ ಪುನಶ್ಚೇತನಗೊಳಿಸಿರುವುದರಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಿಗುವಂತಾಗಿದೆ. ವ್ಯವಸಾಯಕ್ಕೂ ಅನುಕೂಲವಾಗಿದೆ’ ಎಂದರು.
ಕೆರೆಯ ಗಡಿಯನ್ನು ಗುರುತಿಸಿ, 20 ಸಾವಿರ ಟನ್ ಹೂಳು ತೆಗೆಯಲಾಗಿದೆ. ಕೆರೆ ಸುತ್ತ ಬೆಳೆದಿದ್ದ ಕಳೆ-ಗಿಡಗಳನ್ನು ತೆರವುಗೊಳಿಸಲಾಗಿದೆ. ಏರಿ ನಿರ್ಮಿಸಲಾಗಿದೆ. ಕಾಲುವೆಗಳನ್ನು ಸ್ವಚ್ಛಗೊಳಿಸಿ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುವಂತೆ ಮಾಡಲಾಗಿದೆ. ಕೆರೆ ಸುತ್ತಲೂ ಔಷಧಿ ಸಸ್ಯಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ವಿವಿಧ ಪ್ರಭೇದದ ಗಿಡಗಳನ್ನು ನೆಡಲಾಗಿದೆ.
ಆರ್‌ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ, ಸದಸ್ಯ ಎಂ.ಚಿಕ್ಕಣ್ಣ, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ, ಪಿಡಿಒ ನಾಗರಾಜ್, ಬಿಜೆಪಿ ಮುಖಂಡರಾದ ಸೋಮಶೇಖರ್, ಅಪ್ಪಣ್ಣಗೌಡ, ಪ್ರಕಾಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.