ಬೆಂಗಳೂರು: ತಮಿಳುನಾಡಿನ ತಿರುವಣ್ಣಾಮಲೈ–ದಿಂಡಿವಣ್ಣಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಅಪಘಾತ ಸಂಭವಿಸಿದ್ದು, ಕರ್ನಾಟಕ ಇಬ್ಬರು ಪೊಲೀಸರು ಸೇರಿ ಮೂವರು ಮೃತಪಟ್ಟಿದ್ದಾರೆ.
‘ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 3ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್ ಟಿ. ಪ್ರಭಾಕರ್, ವಿಜಯಪುರದ ಐಆರ್‌ಬಿ (ಇಂಡಿಯನ್ ರಿಸರ್ವ ಬೆಟಾಲಿಯನ್) ಕಾನ್‌ಸ್ಟೆಬಲ್ ವಿಠ್ಠಲ್ ಗಡಾದರ ಹಾಗೂ ತಮಿಳುನಾಡಿನ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ದಿನೇಶ್ ಮೃತರು’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ವಿಜಯಪುರದ ಐಆರ್‌ಬಿ ಉಪ ಕಮಾಂಡೆಂಟ್ ಯು.ಎನ್. ಹೇಮಂತ್ ಕುಮಾರ್ ಹಾಗೂ ತಮಿಳುನಾಡು ಕಾನ್‌ಸ್ಟೆಬಲ್ ಜಯಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.
ಲೋಕಸಭಾ ಚುನಾವಣೆ ಕರ್ತವ್ಯ: ‘ಕೆಎಸ್‌ಆರ್‌ಪಿ ತುಕಡಿಯನ್ನು ಲೋಕಸಭಾ ಚುನಾವಣೆ ಭದ್ರತೆಗೆಂದು ತಮಿಳುನಾಡಿಗೆ ಇತ್ತೀಚೆಗೆ ಕಳುಹಿಸಲಾಗಿತ್ತು. ಹೇಮಂತ್‌ಕುಮಾರ್ ಅವರು ತುಕಡಿ ನೇತೃತ್ವ ವಹಿಸಿದ್ದರು. ಟಿ. ಪ್ರಭಾಕರ್, ವಿಠ್ಠಲ್ ಸೇರಿದಂತೆ ಹಲವರು ತಂಡದಲ್ಲಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘ಕೆಎಸ್‌ಆರ್‌ಪಿ ಹಾಗೂ ತಮಿಳುನಾಡಿನ ಪೊಲೀಸರು, ಜೀಪಿನಲ್ಲಿ (ಟಿಎನ್ 19 ಜಿ 0167) ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಹೊರಟಿದ್ದರು. ಇದೇ ಸಂದರ್ಭದಲ್ಲಿ ತಮಿಳುನಾಡು ಸಾರಿಗೆ ನಿಗಮದ ಬಸ್ (ಟಿಎನ್ 25 ಎನ್ 0401), ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದಿತ್ತು.’
‘ಅಪಘಾತದಲ್ಲಿ ತೀವ್ರ ಗಾಯಗೊಂಡು ಪ್ರಭಾಕರ್, ವಿಠ್ಠಲ್, ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರಿಗೆ ತೀವ್ರ ಗಾಯಗಳಾಗಿವೆ’ ಎಂದರು.
‘ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಯೊಬ್ಬರನ್ನು ತಮಿಳುನಾಡಿಗೆ ಕಳುಹಿಸಲಾಗಿದೆ. ಪೊಲೀಸರ ಮೃತದೇಹವನ್ನು ರಾಜ್ಯಕ್ಕೆ ತರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.