ಬೆಂಗಳೂರು: ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್‌ನ (ಎನ್‌ಸಿವಿಟಿ) ಮಾನ್ಯತೆ ಪಡೆದಿರುವ ರಾಜ್ಯದಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಎರಡು ಸಾವಿರ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ‘ಶೂನ್ಯ ಫಲಿತಾಂಶ’ ನಮೂದಿಸಿರುವುದರಿಂದ ಅವರೆಲ್ಲ ಭವಿಷ್ಯದ ಬಗ್ಗೆ ಕಂಗಾಲಾಗಿದ್ದಾರೆ.
2018ರಲ್ಲಿ ಐಟಿಐಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2020ರ ನವೆಂಬರ್‌ನಲ್ಲಿ ಎಂಜಿನಿಯರಿಂಗ್ ಡ್ರಾಯಿಂಗ್ ಆಫ್‌ಲೈನ್ ಪರೀಕ್ಷೆ ಹಾಗೂ ಉಳಿದ ಮೂರು ವಿಷಯಗಳಿಗೆ ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ವಿವಿಧ ಹಂತಗಳಲ್ಲಿ ಆನ್‌ಲೈನ್ ಪರೀಕ್ಷೆಗಳು
ನಡೆದಿದ್ದವು.
ರಾಜ್ಯದಲ್ಲಿ 40 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಮೇ 31ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ, 2 ಸಾವಿರ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಎಂಜಿನಿಯರಿಂಗ್ ಡ್ರಾಯಿಂಗ್ ವಿಷಯದಲ್ಲಿ ‘0’ ಎಂದು ನಮೂದಿಸಲಾಗಿದೆ. ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಎಡವಟ್ಟು ಹೇಗೆ: ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡ್ರಾಯಿಂಗ್‌ನಲ್ಲಿ ಪಡೆದಿರುವ ಅಂಕಗಳನ್ನು ರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯವರು ಎಂಐಎಸ್ ಪೋರ್ಟಲ್‌ನಲ್ಲಿ ಸರಿಯಾಗಿ ಮಾಡದ ಕಾರಣ ‘ಶೂನ್ಯ ಫಲಿತಾಂಶ‘ ಬಂದಿದೆ ಎಂಬ ಆರೋಪ ಕೇಳಿಬಂದಿವೆ.
(ಎನ್‌ಸಿವಿಟಿ) ಮಾನ್ಯತೆ ಪಡೆದ ಐಟಿಐನ ವಿದ್ಯಾರ್ಥಿಗಳಿಗೆಎಂಜಿನಿಯರಿಂಗ್ ಡ್ರಾಯಿಂಗ್ ವಿಷಯದ ಆಫ್‌ಲೈನ್ ಪರೀಕ್ಷೆಯನ್ನುರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯವರು ನಡೆಸಿದರೆ, ಉಳಿದ ಮೂರು ವಿಷಯಗಳ ಆನ್‌ಲೈನ್ ಪರೀಕ್ಷೆಗಳನ್ನು ಕೇಂದ್ರದ ಕೌಶಲ ಅಭಿವೃದ್ಧಿ ಸಚಿವಾಲಯದ ಅಧೀನದ ತರಬೇತಿ ಮಹಾನಿರ್ದೇಶನಾಲಯದವರು (ಡಿಜಿಟಿ) ನಡೆಸುತ್ತಾರೆ.ಇವೆರಡು ಇಲಾಖೆಗಳ ಸಮನ್ವಯ ಕೊರತೆಯಿಂದ ಹೀಗಾಗುತ್ತಿದೆ.ಆಫ್‌ಲೈನ್ ಪರೀಕ್ಷೆಯ ಅಂಕಗಳು ಪೋರ್ಟಲ್‌ನಲ್ಲಿ ನಮೂದಾಗಿದ್ದನ್ನು ಖಚಿತಪಡಿಸಿಕೊಳ್ಳದೆಯೇ ಡಿಜಿಟಿಯವರು ಫಲಿತಾಂಶ ಪ್ರಕಟಿಸಿದ್ದರಿಂದ ಅವಾಂತರ ಆಗಿದೆ ಎನ್ನುತ್ತಾರೆ ರಾಜ್ಯದ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್.
‘ಕೋವಿಡ್‌ನಿಂದಾಗಿ ಆಫ್‌ಲೈನ್ ಪರೀಕ್ಷೆಯನ್ನು ಆರು ತಿಂಗಳು ತಡವಾಗಿ ನಡೆಸಲಾಯಿತು. ಆನ್‌ಲೈನ್ ಪರೀಕ್ಷೆ ಈ ವರ್ಷದ ಜನವರಿಯಲ್ಲಿ ಶುರುವಾಗಿ ಏಪ್ರಿಲ್‌ನಲ್ಲಿ ಮುಗಿದಿದೆ. ಹೀಗಾಗಿ ಒಂದು ವರ್ಷ ವ್ಯರ್ಥವಾಗಿದೆ. ಈಗ ಶೂನ್ಯ ಫಲಿತಾಂಶ ಬಂದಿರುವುದರಿಂದ ಡಿಪ್ಲೊಮಾ ಮತ್ತಿತರ ಕೋರ್ಸ್‌ಗಳಿಗೆ ಸೇರಲು, ಕಂಪನಿಗಳಲ್ಲಿ ಅಪ್ರೆಂಟಿಸ್‌ಗಳಾಗಲು, ಉದ್ಯೋಗ ಗಿಟ್ಟಿಸಲು ಅವಕಾಶವಿಲ್ಲದಂತಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಆನ್‌ಲೈನ್‌ನಿಂದಾಗಿ ಕುಸಿದ ಫಲಿತಾಂಶ
ತರಬೇತಿ ಮಹಾನಿರ್ದೇಶನಾಲಯದವರು ಮೊದಲ ಬಾರಿಗೆ ಮೂರು ವಿಷಯಗಳಿಗೆ ಏಕಕಾಲದಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಿದ್ದಾರೆ. ಬೆಂಗಳೂರಿನ ಮೂರು ಕೇಂದ್ರಗಳಲ್ಲಿ ದಿನಕ್ಕೆ 150 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಿತು. ನೆಟ್‌ವರ್ಕ್ ಸಮಸ್ಯೆ, ಸರ್ವರ್ ದೋಷದಿಂದಾಗಿ ಸಕಾಲದಲ್ಲಿ ಲಾಗ್ ಇನ್ ಸಾಧ್ಯವಾಗುತ್ತಿರಲಿಲ್ಲ. ಆದರೆ, ನಿಗದಿಯಂತೆ 3 ಗಂಟೆಯಲ್ಲೇ ಲಾಗ್ ಔಟ್ ಆಗುತ್ತಿತ್ತು. ಹೀಗಾಗಿ ಸರಿಯಾಗಿ ಪರೀಕ್ಷೆ ಬರೆಯಲು ಆಗಲಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಉಚಿತ ಲ್ಯಾಪ್‌ಟ್ಯಾಪ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡಲು ತಂದಿದ್ದಲ್ಯಾಪ್‌ಟ್ಯಾಪ್‌ಗಳನ್ನು ಪರೀಕ್ಷೆಗೆ ಬಳಸಲಾಯಿತು. ಅವುಗಳಿಗೆ ಮೌಸ್ ಸಹ ಇರಲಿಲ್ಲ. ಗ್ರಾಮಾಂತರ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆಲ್ಯಾಪ್‌ಟ್ಯಾಪ್ ಬಳಸಿದ ಅನುಭವ ಇರುವುದಿಲ್ಲ. ಅಂತಹವರಿಗೆ ಏಕಾಏಕಿ ಆಲ್‌ಲೈನ್ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯಕ್ಕೆ ಹೊರತಾದ ಪ್ರಶ್ನೆಗಳೇ ಹೆಚ್ಚು
‘ಐಟಿಐನಲ್ಲಿ ಬೇರೆ ಬೇರೆ ಟ್ರೇಡ್‌ಗಳನ್ನು ಸೇರಿಸಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂದು ಎರಡು ಸಮೂಹ ಮಾಡಲಾಗಿದೆ. ಎಲೆಕ್ಟ್ರಿಕಲ್ ವಿಭಾಗದವರಿಗೆ 50ರಲ್ಲಿ 40 ಪ್ರಶ್ನೆಗಳನ್ನು ಎಲೆಕ್ಟ್ರಾನಿಕ್ಸ್‌ಗೆ ಸೀಮಿತವಾಗಿ ಕೇಳಲಾಗಿದೆ. ಈ ಸಮೂಹದಲ್ಲಿರುವ 17 ಟ್ರೇಡ್‌ಗಳಲ್ಲೂ ಪ್ರಶ್ನೆಗಳನ್ನು ಕೇಳಬೇಕಿತ್ತು. ಪಠ್ಯಕ್ರಮವನ್ನು ಸರಿಯಾಗಿ ರೂಪಿಸಿ, ಅದಕ್ಕನುಗುಣವಾಗಿ ಪ್ರಶ್ನೆಗಳನ್ನು ಕೇಳಬೇಕು. ಆ ರೀತಿ ಮಾಡದೆ ನಮ್ಮನ್ನು ಬಲಿಪಶುಗಳನ್ನಾಗಿಸುವುದು ನ್ಯಾಯವೇ’ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.
***
ಅಂಕಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಡಿಜಿಟಿಯವರು ಸೂಕ್ತ ತರಬೇತಿ ನೀಡಿಲ್ಲ. ಆದ ಲೋಪ ಸರಿಪಡಿಸಲು ಜೂನ್ 18ರವರೆಗೆ ಅವಕಾಶ ನೀಡಿದ್ದಾರೆ. ಗುರುವಾರದಿಂದಲೇ ಅಪ್‌ಲೋಡ್ ಕಾರ್ಯ ಶುರುವಾಗಲಿದೆ.</p>
-ಡಾ.ಕೆ.ಹರೀಶ್ ಕುಮಾರ್, ಆಯುಕ್ತ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.