ಬೆಂಗಳೂರು: ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳನ್ನು (ಆರ್.ಸಿ. ಕಾಲೇಜು) ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಸೇರ್ಪಡೆ ಮಾಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಇಲಾಖೆಯ ನಿರ್ಧಾರಕ್ಕೆ ಎರಡೂ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಿರುವಂತೆಯೇ ಸ್ವತಂತ್ರವಾಗಿರಲು ಬಿಡಬೇಕು. ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಸೇರ್ಪಡೆ ಮಾಡುವ ಮೂಲಕ ಮತ್ತಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಾರದು. ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ಸರ್ಕಾರಿ ಕಲಾ ಕಾಲೇಜಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳು, ಆರ್.ಸಿ. ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಠ್ಯಕ್ರಮ, ವಿಷಯಗಳ ಸಂಯೋಜನೆ ಮತ್ತಿತರ ಶೈಕ್ಷಣಿಕ ವಿಷಯಗಳಿಗೆ ವಿಶ್ವವಿದ್ಯಾಲಯದ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ, ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಾಲೇಜಿನ ಪ್ರಾಂಶುಪಾಲರಿಗಿದೆ. ಇದರಿಂದ ಅನುಕೂಲವಾಗಿದೆ. ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಸೇರ್ಪಡೆಯಾದರೆ ಎಲ್ಲದಕ್ಕೂ ಮೇಲಿನ ಆದೇಶಕ್ಕೆ ಕಾಯಬೇಕು. ಇದು ವಿಳಂಬಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ರೋಹನ್, ಅಶೋಕ್ ರಾಜ್, ನಿರಂಜನ ಮೂರ್ತಿ.
ಘಟಕ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಅದೇ ವಿಶ್ವವಿದ್ಯಾಲಯಗಳ ಘಟಕ ಕಾಲೇಜುಗಳಿಗೆ ಮಾತ್ರ ವರ್ಗಾವಣೆ ಪಡೆಯಬಹುದು. ಈಗಿರುವಂತೆ ರಾಜ್ಯದ ಯಾವುದೇ ಕಾಲೇಜುಗಳಿಗೆ ವರ್ಗಾವಣೆ ಪಡೆಯುವ ಅವಕಾಶ ಇರುವುದಿಲ್ಲ. ಇದರಿಂದ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ ಎನ್ನುವುದು ಒಂದು ವಲಯದ ಅಧ್ಯಾಪಕರ ಅನಿಸಿಕೆ.
ಐದೂವರೆ ಸಾವಿರದಷ್ಟು ವಿದ್ಯಾರ್ಥಿಗಳನ್ನು ಒಳಗೊಂಡ ಘಟಕ ಕಾಲೇಜುಗಳು ಸೇರ್ಪಡೆಯಾಗುವುದರಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಪನ್ಮೂಲ ಹೆಚ್ಚುವ ಜತೆಗೆ, ನಗರದ ಪ್ರಮುಖ ಸ್ಥಳಗಳಲ್ಲಿ ಇರುವ ಕಾಲೇಜುಗಳನ್ನು ಬಳಸಿಕೊಂಡು ಹೆಚ್ಚುವರಿ ಕೋರ್ಸ್‌ಗಳನ್ನು ಆರಂಭಿಸಬಹುದು. ಸಾಕಷ್ಟು ಅಭಿವೃದ್ಧಿ ಮಾಡಬಹುದು ಎನ್ನುವುದು ವಿಶ್ವವಿದ್ಯಾಲಯದ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.