ADVERTISEMENT

ಬೆಂಗಳೂರು: ಎರಡೂವರೆ ವರ್ಷದಲ್ಲಿ 13 ಸಾವಿರ ಬೈಕ್‌ ಕಳವು

* ದ್ವಿಚಕ್ರ ವಾಹನ ಕಳವು ನಿಯಂತ್ರಣಕ್ಕೆ ಪೊಲೀಸರ ಹರಸಾಹಸ * ಕದ್ದ ವಾಹನ ವಿಲೇವಾರಿಗೆ ನಾನಾ ಮಾರ್ಗ

ಕೆ.ಎಸ್.ಸುನಿಲ್
Published 16 ಅಕ್ಟೋಬರ್ 2024, 0:13 IST
Last Updated 16 ಅಕ್ಟೋಬರ್ 2024, 0:13 IST
ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ವೀಕ್ಷಿಸಿದರು. 
ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ವೀಕ್ಷಿಸಿದರು.    

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅವುಗಳ ಕಳವು ಪ್ರಕರಣಗಳೂ ಹೆಚ್ಚುತ್ತಿವೆ. ಎರಡೂವರೆ ವರ್ಷದಲ್ಲಿ 13 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿದೆ. ದ್ವಿಚಕ್ರ ವಾಹನಗಳ ಕಳವು ನಿಯಂತ್ರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ನಗರದಲ್ಲಿ ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿವೆ. ನಿತ್ಯ ಸರಾಸರಿ ಒಂದೂವರೆ ಸಾವಿರದಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿ ಅಗುತ್ತಿವೆ. ವಾಹನಗಳ ಸಂಖ್ಯೆ ಹೆಚ್ಚಿದ ವೇಗದಲ್ಲೇ ಕಳ್ಳತನ ಪ್ರಕರಣಗಳೂ ಏರಿಕೆಯಾಗುತ್ತಿವೆ.

ಪೊಲೀಸ್‌ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ ನಿತ್ಯ ಸರಾಸರಿ 14ರಿಂದ 16 ದ್ವಿಚಕ್ರ ವಾಹನಗಳ ಕಳವು ಆಗುತ್ತಿದೆ. ಎರಡೂವರೆ ವರ್ಷದಲ್ಲಿ 13,628 ವಾಹನಗಳು ಕಳ್ಳತನವಾಗಿವೆ. ಪ್ರಸಕ್ತ ವರ್ಷ (ಆಗಸ್ಟ್‌ ಅಂತ್ಯಕ್ಕೆ) 3,263 ವಾಹನ ಕಳವಾಗಿವೆ. ಈ ಪೈಕಿ 779 ವಾಹನಗಳನ್ನು ಮಾತ್ರ ಪತ್ತೆ ಮಾಡಲಾಗಿದೆ.

ADVERTISEMENT

ಎರಡೂವರೆ ವರ್ಷಗಳಲ್ಲಿ ಕಳವಾಗಿದ್ದ 13,628 ದ್ವಿಚಕ್ರ ವಾಹನಗಳಲ್ಲಿ 4,420 ವಾಹನಗಳನ್ನಷ್ಟೇ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಎರಡೂವರೆ ವರ್ಷಗಳಲ್ಲಿ ಪತ್ತೆ ಪ್ರಮಾಣ ಶೇಕಡ 32ರಷ್ಟಿದೆ.

ಕದ್ದ ವಾಹನಗಳ ಭಾಗಗಳನ್ನು ಬೇರ್ಪಡಿಸಿ, ಎಂಜಿನ್ ಮತ್ತು ಚಾಸ್ಸಿ ಸಂಖ್ಯೆಯನ್ನು ತಿರುಚಿ ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. ಸರಗಳ್ಳತನ, ಮನೆ ಕಳವು, ದರೋಡೆ, ಕೊಲೆಯಂತಹ ಗಂಭೀರ ಅಪರಾಧ ಕೃತ್ಯಗಳಿಗೂ ಕದ್ದ ವಾಹನಗಳನ್ನೇ ಬಳಸುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ.

ರಸ್ತೆಬದಿ, ಪಾರ್ಕಿಂಗ್ ಸ್ಥಳ, ಶಾಪಿಂಗ್ ಮಾಲ್, ಉದ್ಯಾನ, ಬಸ್–ರೈಲು ನಿಲ್ದಾಣ, ಮನೆ–ಕಚೇರಿ ಮುಂದೆ ನಿಲ್ಲಿಸುತ್ತಿರುವ ದ್ವಿಚಕ್ರ ವಾಹನಗಳನ್ನೇ ಗುರಿಯಾಗಿಸಿ ಕಳವು ಮಾಡಲಾಗುತ್ತಿದೆ. ಈ ವಾಹನಗಳ ನೋಂದಣಿ ಸಂಖ್ಯೆ ಪ್ಲೇಟ್‌, ಎಂಜಿನ್ ನಂಬರ್ ಬದಲಿಸಿ, ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಕಳ್ಳತನದ ವಿಧಾನ:
ಹ್ಯಾಂಡಲ್ ಲಾಕ್ ಮುರಿದು ಕಳ್ಳತನ, ಒಎಲ್‌ಎಕ್ಸ್‌ ಜಾಹೀರಾತು ನೋಡಿ ಕಳವು, ಜಾಲಿ ರೈಡ್‌ಗಾಗಿ ಐಷಾರಾಮಿ ಬೈಕ್‌ಗಳ ಕಳ್ಳತನ, ಮಳೆ ಬರುವ ವೇಳೆ ಕಳ್ಳತನ... ಹೀಗೆ ಹತ್ತಾರು ನೆಪದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನವಾಗುತ್ತಿವೆ.

ದುಶ್ಚಟಕ್ಕೆ ದಾಸರಾಗಿರುವವರು, ಅಪರಾಧ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದವರು, ಸಾಲ ತೀರಿಸಲು ಹಾಗೂ ವಿಲಾಸಿ ಜೀವನಕ್ಕೆ ಹಣ ಹೊಂದಿಸಲು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿರುವುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ.

ಮಳೆ ಸುರಿಯುವಾಗ ಜನರ ಓಡಾಟ ಕಡಿಮೆ ಇರುತ್ತದೆ ಎಂಬ ಕಾರಣಕ್ಕಾಗಿ ಅದೇ ಸಮಯದಲ್ಲಿ ದ್ವಿಚಕ್ರ ವಾಹನಗಳ ಕಳವು ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ತಂಡವೊಂದನ್ನು ಈಚೆಗೆ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವಾಹನಗಳ ಮಾರಾಟಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಗಮನಿಸಿ, ಟೆಸ್ಟ್‌ ಡ್ರೈವ್ ನೆಪದಲ್ಲಿ ವಾಹನ ಕದ್ದೊಯ್ದಿದ್ದವರೂ ಸಿಕ್ಕಿಬಿದ್ದಿದ್ದಾರೆ.

‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಬ್ಬರು ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನೇ ಗುರಿಯಾಗಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಅವರಿಗಿದ್ದ  ತಾಂತ್ರಿಕ ಜ್ಞಾನವನ್ನು ಇಂತಹ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದರು.

‘ಕೆಲ ಕಳ್ಳರು ಕಲರ್‌ ಪ್ರಿಂಟರ್ ಇಟ್ಟುಕೊಂಡು ನೋಂದಣಿ ಪ್ರಮಾಣ ಪತ್ರ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಅನುಮಾನ ಬಾರದಂತೆ ಸೃಷ್ಟಿಸುತ್ತಿದ್ದರು. ಆರ್‌ಟಿಒ ನೀಡುವ ಸ್ಮಾರ್ಟ್‌ ಕಾರ್ಡ್‌ಗಳಂತೇ ನಕಲಿ ದಾಖಲೆಗಳು ಇರುತ್ತಿದ್ದವು. ಕಳ್ಳತನ ಮಾಡಿದ್ದ ವಾಹನಗಳ ಬಿಡಿಭಾಗಗಳನ್ನು ಬಿಚ್ಚಿ ಬೇರೊಂದು ವಾಹನಕ್ಕೆ ಜೋಡಿಸುತ್ತಿದ್ದರು. ಅಸಲಿ ಸ್ಟಿಕರ್‌ ಸಹ ಬದಲಾವಣೆ ಮಾಡುತ್ತಿದ್ದರು’ ಎಂದು ತಿಳಿಸಿದ್ದಾರೆ.

‘ಎಂಜಿನ್‌ ಮತ್ತು ಚಾಸ್ಸಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ ನಂತರ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಒಎಲ್‌ಎಕ್ಸ್‌ ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಖರೀದಿಗೆ ಆಸಕ್ತಿ ತೋರಿದವರನ್ನು ಖುದ್ದು ಭೇಟಿ ಮಾಡಿ ನಕಲಿ ದಾಖಲೆಗಳನ್ನು ಅಸಲಿಯೆಂದು ತೋರಿಸುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಎಚ್ಚರ ಅಗತ್ಯ’:

‘ದ್ವಿಚಕ್ರ ವಾಹನಗಳ ಕಳ್ಳತನ ತಡೆಗಟ್ಟಲು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಅವುಗಳ ಮಾರಾಟದ ಸಂದರ್ಭದಲ್ಲಿಯೇ ಕೆಲವು ಕ್ರಮಗಳನ್ನು ಅನುಸರಿಸುವಂತೆ ತಯಾರಕರು ಹಾಗೂ ಮಾರಾಟಗಾರರಿಗೆ ಪತ್ರ ಬರೆಯಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

‘ವಾಹನಗಳ ವಿನ್ಯಾಸ ಮಾತ್ರವಲ್ಲದೆ ಆರಂಭಿಕ ಹಂತದಲ್ಲೇ ದ್ವಿಚಕ್ರ ವಾಹನಗಳಿಗೆ ಜಿಪಿಎಸ್, ವ್ಹೀಲ್ ಲಾಕಿಂಗ್, ಗಟ್ಟಿಮುಟ್ಟಾದ ಹ್ಯಾಂಡಲ್ ಲಾಕಿಂಗ್ ಅಳವಡಿಸಲು ಒತ್ತು ನೀಡುವಂತೆ ಹಾಗೂ ಮಾರಾಟದ ಸಂದರ್ಭದಲ್ಲಿ ಕಳವು ತಡೆ ಸಾಧನ ಅಳವಡಿಸುವಂತೆ ಸಲಹೆ ನೀಡಲಾಗಿದೆ’ ಎಂದು ಹೇಳಿದರು.

ಸುರಕ್ಷತಾ ಕ್ರಮಗಳಿಲ್ಲದಿರುವ ಕಾರಣ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಕಳ್ಳತನ ಮಾಡಲಾಗುತ್ತಿದೆ. ಕದ್ದ ವಾಹನಗಳನ್ನು ಗಂಭೀರ ಅಪರಾಧ ಕೃತ್ಯಗಳಿಗೆ ಬಳಸಿರುವ ನಿದರ್ಶನಗಳಿವೆ.
ಬಿ.ದಯಾನಂದ, ಪೊಲೀಸ್ ಕಮಿಷನರ್

ಕಳ್ಳತನ ಹೆಚ್ಚಲು ಕಾರಣ?

* ಮುನ್ನೆಚ್ಚರಿಕೆ ವಹಿಸದೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದು

* ವಾಹನದಲ್ಲಿಯೇ ಕೀ ಬಿಟ್ಟು ಹೋಗುವುದು

* ಸುಲಭವಾಗಿ ಮುರಿಯುವಂತಹ ಹ್ಯಾಂಡಲ್ ಲಾಕ್ ಬಳಸುವುದು

* ಕತ್ತಲು ಪ್ರದೇಶಗಳಲ್ಲಿ ವಾಹನ ನಿಲುಗಡೆ

ವಾಹನ ಕಳ್ಳತನ ತಡೆಗೆ ಕ್ರಮ..

* ವಾಹನಗಳಿಗೆ ಜಿಪಿಎಸ್‌ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸುವುದು

* ವ್ಹೀಲ್ ಲಾಕಿಂಗ್ ವ್ಯವಸ್ಥೆ ಅಳವಡಿಕೆ

* ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ

* ವಾಹನಗಳು ಲಾಕ್ ಆಗಿರುವುದನ್ನು ಖಚಿತ ಪಡಿಸಿಕೊಳ್ಳುವುದು

* ವಾಹನಗಳಲ್ಲಿ ಕೀ ಬಿಟ್ಟು ಹೋಗದಿರುವುದು

* ಗಟ್ಟಿಮುಟ್ಟಾದ ಹ್ಯಾಂಡ್ ಲಾಕ್‌ಗಳನ್ನು ಅಳವಡಿಸುವುದು

* ಕಳ್ಳತನಕ್ಕೆ ಪ್ರಯತ್ನಿಸಿದಾಗ ಸೈರನ್ ಮೊಬೈಲ್‌ಗೆ ಮಾಹಿತಿ ಬರುವಂತೆ ಮಾಡುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.